ಕಳೆದ ವರ್ಷ ಪ್ರಧಾನಿ ಮೋದಿ ಜಾರಿಗೊಳಿಸಲಾದ ನೋಟು ನಿಷೇಧ ಸಾಹಸದಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ತಾಂತ್ರಿಕವಾಗಿ ಅಥವಾ ಆರ್ಥಿಕತೆಗೆ ಪೂರಕವಾಗಿ ಇಂತಹ ನೋಟು ನಿಷೇಧ ಅಗತ್ಯವಿರಲಿಲ್ಲ. ಬೇಜವಾಬ್ದಾರಿ ಸರಕಾರದ ನಿರ್ಣಯದಿಂದಾಗಿ ದೇಶದ ಆರ್ಥಿಕತೆ ಪಾತಾಳದತ್ತ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1990 ರ ದಶಕದ ಆರಂಭದ ಸುಧಾರಣೆಯ ವಾಸ್ತುಶಿಲ್ಪಿ ಎಂದು ಪರಿಗಣಿಸಲ್ಪಟ್ಟಿರುವ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್, ಕೆಲವು ಲ್ಯಾಟಿನ್ ಅಮೆರಿಕದ ದೇಶವನ್ನು ಹೊರತುಪಡಿಸಿ, ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನೋಟು ನಿಷೇಧ ಯಶಸ್ವಿಯಾಗಲಿಲ್ಲ ಎಂದು ತಿಳಿಸಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸರಕಾರದ ನೋಟು ನಿಷೇಧ ಸರಿಯಾದ ಕ್ರಮವಾಗಿತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನೋಟು ನಿಷೇಧ ಯಾವುದೇ ಕಾರಣಕ್ಕೂ ಅಗತ್ಯವಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯವೆಂದರು.
ಕಳೆದ ವರ್ಷ ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 500 ರೂಪಾಯಿ ಮತ್ತು 1000 ಕರೆನ್ಸಿ ನೋಟುಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು.
ಈ ಪ್ರಕ್ರಿಯೆಯಿಂದಾಗಿ ಚಲಾವಣೆಯಲ್ಲಿರುವ ಸುಮಾರು 86 ಶೇಕಡಾ ನೋಟು ಚಲಾವಣೆಯನ್ನು ಹಿಂತೆಗೆದುಕೊಂಡಿದ್ದರಿಂದ ಆರ್ಥಿಕತೆ ಕುಸಿಯುವಂತಾಯಿತು. ಅದನ್ನು ದೇಶದ ಜನತೆ ನೋಡುತ್ತಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.