ಮುಂಬೈ: ಶಿವಸೇನಾ ಯುಬಿಟಿ ಸಂಸದ ಸಂಜಯ್ ರಾವುತ್ ಅವರಿಗೆ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಡಾ. ಮೇಧಾ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
ಮೀರಾ ಬಾಯಂಧರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ₹ 100 ಕೋಟಿ ಮೊತ್ತದ ಹಗರಣದಲ್ಲಿ ನನ್ನ ಮತ್ತು ನನ್ನ ಪತಿ ಕಿರೀಟ್ ಸೋಮಯ್ಯ ಅವರ ವಿರುದ್ಧ ಸಂಜಯ್ ರಾವುತ್ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಮೇಧಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ರಾವುತ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು ಮಾನಹಾನಿಕರವಾಗಿದ್ದು, ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಚಾರಿತ್ರ್ಯ ಹದಗೆಡುವಂಥ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಆರೋಪಿಸಿ ಮೇಧಾ ಅವರು ಕಳೆದ ವರ್ಷವೇ ಮಝಗಾಂವ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ನಾಯಕ ರಾವುತ್ ವಿರುದ್ಧ ಐಪಿಸಿ ಸೆಕ್ಷನ್ 499ರ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಳ್ಳಬೇಕು ಎಂದು ಅವರು ನ್ಯಾಯಾಲಯಕ್ಕೆ ಕೋರಿದ್ದರು.