ಚೆನ್ನೈ : ತಮಿಳು ತಾಯಿಗೆ ವಂದಿಸುವ (ತಮಿಳ್ ತಾಯ್ ವಾಳ್ತ್) ತಮಿಳು ತಾಯಿಯೇ ನಿನಗೆ ವಂದನೆ ಗೀತೆಯನ್ನು ತಮಿಳುನಾಡು ತನ್ನ ನಾಡಗೀತೆಯಾಗಿ ಫೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ತಮಿಳ್ ತಾಯ್ ವಾಳ್ತ್ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರ ಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ ಅವಶ್ಯಕತೆ ಇಲ್ಲ ಎಂದಿತ್ತು. ಆದರೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಹಾಡನ್ನು ನಾಡಗೀತೆಯಾಗಿ ಫೋಷಿಸಿ ಸರ್ಕಾರ ಆದೇಶ ಹೊರಡಿಸಿದ್ದಾರೆ.
55 ಸೆಕೆಂಡುಗಳಿರುವ ಈ ನಾಡಗೀತೆ ಹಾಡುವಾಗ ಅಂಗವಿಕಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳು, ವಿಶ್ವ ವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆತೆಗಳು ಯಾವುದೇ ಕಾರ್ಯಕ್ರಮಗಳು ಆರಂಭಿಸುವ ಮುನ್ನ ಈ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಸ್ಟಾಲಿನ್ ಆದೇಶಿಸಿದ್ದಾರೆ.
ತಮಿಳಿನ ಖ್ಯಾತ ವಿದ್ವಾಂಸ ಎಂ.ಎಸ್ ಪಿಳ್ಳೈ(1855-1897)ಗೀತೆ ಬರೆದಿದ್ದರು. ಎಂ.ಎಸ್ ವಿಶ್ವನಾಥನ್ ಸಂಗೀತ ನೀಡಿದ್ದಾರೆ. ಇದು 1970ರಿಂದ ಅಧಿಕೃತ ಗೀತೆ ಮಾನ್ಯತೆ ಹೊಂದಿತ್ತು. ಇದೀಗ ಇದಕ್ಕೆ ನಾಡಗೀತೆ ಸ್ಥಾನಮಾನ ದೊರಕಿದೆ.