ಚೆನ್ನೈ : ತಾಯಿಯ ಗರ್ಭ ಮತ್ತು ಸ್ಮಶಾನ ಇದು ಎರಡೇ ಸುರಕ್ಷಿತ ಸ್ಥಳಗಳು ಎಂದು ಪತ್ರ ಬರೆದಿಟ್ಟು ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಪೂನಂ ಪ್ರದೇಶದಲ್ಲಿರುವ ಮನೆಯಲ್ಲಿ ಲೈಂಗಿಕ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿ ಕೆಲಸಕ್ಕಾಗಿ ಮನೆಯಿಂದ ಹೊರಹೋದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಭಾವುಕ ಸಾಲುಗಳನ್ನು ವಿದ್ಯಾರ್ಥಿನಿ ಬರೆದಿದ್ದಾಳೆ. ಜಗತ್ತಿನಲ್ಲಿ ತಾಯಿ ಗರ್ಭ ಹಾಗೂ ಸ್ಮಶಾನವನ್ನು ಬಿಟ್ಟರೆ ಬೇರೆ ಯಾವ ಸ್ಥಳವೂ ಸುರಕ್ಷಿತವಲ್ಲ ಎಂದು ಬರೆದಿದ್ದಾಳೆ.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕಿಯ ಮಗ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದರಿಂದಾಗಿ ೯ನೇ ತರಗತಿ ಓದುತ್ತಿದ್ದಾಗ ವಿದ್ಯಾರ್ಥಿನಿಯನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ವರ್ಗಾಯಿಸಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ಸಂಬಂಧಿಕರಾಗಲಿ, ತರಗತಿಯವರಾಗಲಿ ನೆರವಿಗೆ ಬಂದಿರಲಿಲ್ಲ. ಇದರಿಂದಾಗಿ ಮನನೊಂದ ವಿದ್ಯಾರ್ಥಿನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲೆ ಆತ್ಮಹತ್ಯೆಯ ಪತ್ರಗಳು ಪೊಲೀಸರಿಗೆ ದೊರೆತಿದೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.