ಕೊಲ್ಕತ್ತಾ : ಈ ತಿಂಗಳ ಕೊನೆಗೆ ನಡೆಯುವ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ.
ಈ ಮೂಲಕ ಈ ಸಂಬಂಧ ಇದ್ದ ಎಲ್ಲ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ಬ್ಯಾನರ್ಜಿ ವಿರುದ್ಧ ತಮ್ಮ ಪಕ್ಷ ಪ್ರಚಾರ ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವ ಎಡರಂಗ ಕಾಂಗ್ರೆಸ್ ನಿರ್ಧಾರದ ಬಗ್ಗೆ ಇನ್ನೂ ತನ್ನ ನಿಲುವು ಪ್ರಕಟಿಸಿಲ್ಲ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಸ್ಪರ್ಧಿಸದಿದ್ದರೆ ನಾವು ಸ್ಪರ್ಧಿಸಲು ಸಿದ್ಧ ಎಂದು ಎಡರಂಗ ಹೇಳಿಕೆ ನೀಡಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ನೆಲಕಚ್ಚಿದ್ದವು.
"ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಪರೋಕ್ಷವಾಗಿ ಬಿಜೆಪಿಗೆ ನೆರವಾಗುತ್ತದೆ ಎನ್ನುವುದು ಕಾಂಗ್ರೆಸ್ನ ಭಾವನೆ. ಹೈಕಮಾಂಡ್ ಇದನ್ನು ಮಾಡಲು ಬಯಸುವುದಿಲ್ಲ" ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಮತ್ತು ಸಂಸದ ಅಧೀರ್ ರಂಜನ್ ಚೌಧರಿ ಎನ್ಡಿಟಿವಿ ಜತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.
ಸೌಜನ್ಯದ ಕ್ರಮವಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದು ಎಂದು ಚೌಧರಿ ಪ್ರತಿಪಾದಿಸುತ್ತಾ ಬಂದರೂ, ರಾಜ್ಯದ ಹಲವು ಮುಖಂಡರು ಇದನ್ನು ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್ನಿಂದ ಬಂದಿದೆ. "ನಮ್ಮಲ್ಲಿ ಹಲವು ಮಂದಿ ತೃಣಮೂಲ ವಿರುದ್ಧ ಸ್ಪರ್ಧಿಸಬೇಕು ಎಂಬ ನಿಲುವಿನ ಪರ ಇದ್ದಾರೆ. ಆದ್ದರಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೈಕಮಾಂಡ್ಗೆ ಬಿಟ್ಟಿದ್ದೆವು" ಎಂದು ಕಾಂಗ್ರೆಸ್ ಮುಖಂಡ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಮುರ್ಶಿದಾಬಾದ್ ಜಿಲ್ಲೆ ಬೆರ್ಹ್ರಾಂಪುರದಲ್ಲಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಮಮತಾ ಬ್ಯಾನರ್ಜಿ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಉನ್ನತ ನಾಯಕತ್ವ ನಿರ್ಧರಿಸಿದೆ. ಅವರ ವಿರುದ್ಧ ನಾವು ಪ್ರಚಾರವನ್ನೂ ಮಾಡುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.