ಕೊಲ್ಕತ್ತಾ (ಸೆ. 8): ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲರ ಚಿತ್ತ ಭವಾನಿಪುರ ಕ್ಷೇತ್ರದ ಕಡೆಗೆ ಮೂಡಿದೆ. ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿತ್ತು ಈಗ ಸಿಎಂ ಗಾದಿ ಉಳಿಸಿಕೊಳ್ಳಲು ಭವಾನಿಪುರದಲ್ಲಿ ಕಣಕ್ಕೆ ಇಳಿದಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿಯನ್ನು ಇಲ್ಲೂ ಸೋಲಿಸುವ ಉಮೇದನ್ನು ಬಿಜೆಪಿ ವ್ಯಕ್ತಪಡಿಸಿದೆ. ಈ ಕುರಿತು ಕಳೆದೆರಡು ದಿನಗಳ ಹಿಂದೆ ಮಾತನಾಡಿದ ಬಿಜೆಪಿ ನಂದಿಗ್ರಾಮದಲ್ಲಿ ಸೋತ ಮಮತಾ ಭವಾನಿಪುರದಲ್ಲಿ ಗೆಲುವು ಸಾಧಿಸಲು ಸಾಧ್ಯವಾ ಎಂದು ಪ್ರಶ್ನಿಸಿದ್ದರು. ಸೆ. 30 ರಂದು ನಡೆಯುವ ಈ ಚುನಾವಣೆ ಮೇಲೆ ಮಮತಾ ಬ್ಯಾನರ್ಜಿ ಸಿಎಂ ಸ್ಥಾನದ ಭವಿಷ್ಯ ಉಳಿದಿದೆ.
ಪಶ್ಚಿಮ ಬಂಗಾಳದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ (TMC) ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅಲ್ಲದೇ ತಾವು ಚುನಾವಣೆ ಎದುರಿಸಲು ಸಜ್ಜಾಗಿರುವುದಾಗಿ ತಿಳಿಸಿತ್ತು.
ಚುನಾವಣೆಯಿಂದ ಹಿಂದೆ ಸರಿದ ಕಾಂಗ್ರೆಸ್
ಇನ್ನು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ , ಭವಾನಿಪುರದಿಂದ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ. ಈ ಮೂಲಕ ನಾವು ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೈ ಕಮಾಂಡ್ ಸ್ಪಷ್ಟಪಡಿಸಿದೆ. ಈ ಹಿಂದೆ ಕೂಡ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕೂಡ ಈ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದ್ದರು. ಈ ಮೂಲಕ ಈ ಚುನಾವಣೆ ಬಿಜೆಪಿ ಮತ್ತು ಟಿಎಂಸಿ ನಡುವಿನ ಹೋರಾಟವಾಗಿ ಪರಿಗಣಿಸಲಾಗಿದ್ದು, ಕಾಂಗ್ರೆಸ್ ದೂರದಿಂದಲೇ ನಿಂತು ನೋಡುವ ಕೆಲಸಕ್ಕೆ ಮುಂದಾಗಿದೆ.
2024ರ ಚುನಾವಣೆ ಗಮನದಲ್ಲಿಟ್ಟಿಕೊಂಡು ಕಾಂಗ್ರೆಸ್ ತೃಣಮೂಲ ಪಕ್ಷಕ್ಕೆ ನೆರವಾಗುವ ಕೆಲಸ ನಡೆಸಿದೆ. ದೇಶದಲ್ಲಿ ಟಿಎಂಸಿ ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಪಕ್ಷವಾಗಿ ಹೊರ ಹೊಮ್ಮಿರುವ ಹಿನ್ನಲೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಟಿಎಂಸಿಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದೆ.
ಇನ್ನು ಇತ್ತೀಚೆಗೆ ಸಿಎಂ ಆದ ಬಳಿಕ ಮಮತಾ ಬ್ಯಾನರ್ಜಿ ಮೊದಲ ಬಾರಿ ಕೈ ಗೊಂಡ ದೆಹಲಿ ಪ್ರವಾಸದ ವೇಳೆ ಕೂಡ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಯಾಗಿ ಗಮನಸೆಳೆದರು.
ಭವಾನಿಪುರ ಹೊರತು ಪಡಿಸಿ ಉಳಿದ ಜಂಗೀಪುರ ಕ್ಷೇತ್ರದಲ್ಲಿ ಜಾಕೀರ್ ಹುಸೇನ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ, ಸಂಸರ್ಗಂಜ್ ನಿಂದ ಅರ್ಮಿಲ್ ಇಸ್ಲಾಂ ಚುನಾವಣೆ ಎದುರಿಸಲಿದ್ದಾರೆ. ಶನಿವಾರವಷ್ಟೇ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಇದೇ ತಿಂಗಳ ಅಂತ್ಯದಲ್ಲಿ ಅಂದರೆ, ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಕಡಿಮೆಯಾಗಿರುವ ಹಿನ್ನೆಲೆ ಚುನಾವಣಾ ಆಯೋಗ ಚುನಾವಣೆ ನಡೆಸಲು ಸಜ್ಜಾಗಿದ್ದು, ಟಿಎಂಸಿ ಗೆಲುವಿನ ಉತ್ಸಾಹ ಹೊಂದಿದೆ. ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ತಿಳಿಸಿದ್ದಾರೆ.
ಚುನಾವಣೆ ವೇಳೆ ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಪ್ರಚಾರದ ವೇಳೆ ಯಾವುದೇ ರೋಡ್ ಶೋ, ಯಾವುದೇ ಬೈಕ್ ರ್ಯಾಲಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ