ಲಕ್ನೋ: ಇತ್ತೀಚೆಗಷ್ಟೇ ಹುತಾತ್ಮ ಯೋಧನ ಮನೆಗೆ ಭೇಟಿ ನೀಡುವಾಗ ವಿಶೇಷ ವ್ಯವಸ್ಥೆ ಮಾಡಿ ನಂತರ ಅಧಿಕಾರಿಗಳು ಎಲ್ಲವನ್ನೂ ಹೊತ್ತೊಯ್ದ ಪ್ರಕರಣದಿಂದ ಸಾಕಷ್ಟು ಮುಜುಗರಕ್ಕೊಳಗಾದ ಯುಪಿ ಸಿಎಂ ಯೋಗಿ ತಾನು ಭೇಟಿ ಮಾಡುವ ಸ್ಥಳದಲ್ಲಿ ವಿಶೇಷ ವ್ಯವಸ್ಥೆ ಮಾಡಬೇಡಿ ಎಂದು ಆದೇಶಿಸಿದ್ದಾರೆ.
‘ನಾನೂ ಒಂದು ಕಾಲದಲ್ಲಿ ನೆಲದ ಮೇಲೆ ಕುಳಿತೇ ಕೆಲಸ ಮಾಡುತ್ತಿದ್ದವನು. ಹಾಗಾಗಿ ನಾನು ಭೇಟಿ ನೀಡುವ ಸ್ಥಳದಲ್ಲಿ ಮೊದಲು ಹೇಗಿತ್ತೋ ಹಾಗೇ ಇರಲಿ. ಅದರ ಹೊರತಾಗಿ ವಿಶೇಷ ವ್ಯವಸ್ಥೆಯನ್ನೇನೂ ಮಾಡಬೇಡಿ’ ಎಂದು ಅಧಿಕಾರಿಗಳಿಗೆ ಹುಕುಂ ಹೊರಡಿಸಿದ್ದಾರೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಪಾಕ್ ಯೋಧರಿಂದ ಶಿರಚ್ಛೇದಕ್ಕೊಳಗಾದ ಯೋಧ ಪ್ರೇಮ್ ಸಾಗರ್ ಮನೆಗೆ ಸಿಎಂ ಭೇಟಿ ಕೊಡುವಾಗ ಅಧಿಕಾರಿಗಳು, ಸೋಫಾ, ಟಿವಿ, ಎಸಿ ವ್ಯವಸ್ಥೆ ಮಾಡಿದ್ದರು. ಆದರೆ ಸಿಎಂ ನಿರ್ಗಮಿಸುತ್ತಿದ್ದಂತೆ ಎಲ್ಲವನ್ನೂ ಹೊತ್ತೊಯ್ದು ಯೋಧನ ಕುಟುಂಬಕ್ಕೆ ಅಪಮಾನವೆಸಗಿದ್ದರು. ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.