ನವದೆಹಲಿ: ಇತ್ತೀಚೆಗೆ ಮಕ್ಕಳ ಕಳ್ಳರ ಹಾವಳಿ ಇದೆ ಎಂದು ಸುದ್ದಿ ಹಬ್ಬಿಸಿ ಹಲವರ ಸಾವಿಗೆ ಕಾರಣವಾಗಿದ್ದ ವ್ಯಾಟ್ಸಪ್ ವಿರುದ್ಧ ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.
ಮಕ್ಕಳ ಕಳ್ಳರಿದ್ದಾರೆ ಎಂದೂ ಸೇರಿದಂತೆ ಹಲವು ವದಂತಿಗಳನ್ನು ಹರಿಯಬಿಟ್ಟು ಜವಾಬ್ಧಾರಿಯಿಂದ ನುಣುಚಿಕೊಳ್ಳಬಾರದು ಎಂದು ವ್ಯಾಟ್ಸಪ್ ಗೆ ಕೇಂದ್ರ ಎಚ್ಚರಿಕೆ ಕೊಟ್ಟಿದೆ. ಆದರೆ ಇದಕ್ಕೆ ವ್ಯಾಟ್ಸಪ್ ತನ್ನ ಮೆಸೇಜ್ ಹರಿದಾಡುವಾಗ ಕೈಗೊಳ್ಳಲಿರುವ ಎಚ್ಚರಿಕೆ ಕ್ರಮಗಳನ್ನು ವಿವರಿಸಿದೆ.
ಇಂತಹ ಸಂದೇಶಗಳು ತನ್ನ ತಾಣದಲ್ಲಿ ಹರಿದಾಡದಂತೆ ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳಬೇಕು ಎಂದು ಫೇಸ್ ಬುಕ್ ಮಾಲಿಕತ್ವದ ವ್ಯಾಟ್ಸಪ್ ಸಂಸ್ಥೆಗೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಖಡಕ್ ಸೂಚನೆ ನೀಡಿದೆ. ಇಂತಹ ಸುಳ್ಳು ಸುದ್ದಿ ಹರಿದಾಡದಂತೆ ತಡೆಯಲಿ ವ್ಯಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ನೆರವು ಪಡೆಯಲೂ ಕೇಂದ್ರ ಚಿಂತನೆ ನಡೆಸಿದೆ.
ಕೇಂದ್ರದ ಎಚ್ಚರಿಕೆಯಿಂದ ಎಚ್ಚೆತ್ತಿರುವ ವ್ಯಾಟ್ಸಪ್ ಇನ್ನು ಮುಂದೆ ಫಾರ್ವರ್ಡ್ ಮೆಸೇಜ್ ಗಳನ್ನು ಜನರು ಫಾರ್ವರ್ಡ್ ಮಾಡುವಾಗ ಅದು ಫಾರ್ವರ್ಡ್ ಮಾಡಿದವರು ಯಾರೆಂದು ಗುರುತಿಸುವ ಸೌಲಭ್ಯವನ್ನು ಒದಗಿಸಲಿದೆ ಎಂದಿದೆ. ಅಲ್ಲದೆ, ಒಂದು ಗ್ರೂಪ್ ನಲ್ಲಿ ಯಾರು ಸಂದೇಶ ಕಳುಹಿಸಬೇಕು, ಕಳುಹಿಸಬಾರದು ಎಂಬ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಗ್ರೂಪ್ ಅಡ್ಮಿನ್ ಗೆ ನೀಡಲಿದೆ. ಈ ಮೂಲಕ ಜನರೇ ಸುಳ್ಳು ಸುದ್ದಿಗಳನ್ನು ಹರಡದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಮಜಾಯಿಷಿ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.