ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ್ ಹೆಲ್ತ್ ಕಾರ್ಡ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸದ್ಯದಲ್ಲೇ ಈ ಯೋಜನೆಗೆ ಹೊಸ ಕಾಯಿಲೆಗಳ ಚಿಕಿತ್ಸಾ ಸೌಲಭ್ಯಗಳೂ ಸೇರಿಕೊಳ್ಳಲಿವೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆಯುಷ್ಮಾನ್ ಹೆಲ್ತ್ ಕಾರ್ಡ್ ನ್ನು 70 ವರ್ಷ ದಾಟಿದ ವಯೋವೃದ್ಧರಿಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ವಯೋವೃದ್ಧರಿಗೆ ಆರ್ಥಿಕ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಈ ಹೊಸ ಬದಲಾವಣೆ ತಂದಿತ್ತು. ಇದರ ಜೊತೆಗೆ ಈಗ ಕೆಲವೊಂದು ಹೊಸ ಕಾಯಿಲೆಗಳನ್ನೂ ಚಿಕಿತ್ಸೆಯಲ್ಲಿ ಒಳಗೊಳಿಸಲು ಚಿಂತನೆ ನಡೆಸಿದೆ.
ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುವ ಮರೆಗುಳಿತನ, ಕ್ಯಾನ್ಸರ್, ಹೃದಯ ಸಂಬಂಧೀ ಕಾಯಿಲೆಗಳನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ 4.5 ಕೋಟಿ ಕುಟುಂಬಗಳ 6 ಕೋಟಿಗೂ ಅಧಿಕ ಮಂದಿಗೆ ಸಹಾಯವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.
ಆಧಾರ್ ಕಾರ್ಡ್ ನಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಯುಷ್ಮಾನ್ ಹೆಲ್ತ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಪಿಎಂಜೆಎವೈ ಆಫ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಈ ಯೋಜನೆಡಿಯಲ್ಲಿ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.