ಲಕ್ನೋ : 21 ವರ್ಷದ ಕಾನೂನು ವಿದ್ಯಾರ್ಥಿಯನ್ನು ಕೊಂದು ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಚರಂಡಿಗೆ ಬಿಸಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದು,
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಜೂನ್ 27ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಯಶ್ ರಸ್ತೋಗಿ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಶವೇಜ್, ಇಮ್ರಾನ್ ಹಾಗೂ ಸಲ್ಮಾನ್ ಎಂಬವರನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿ ಯಶ್ ರಸ್ತೋಗಿಯ ಶವ ಶನಿವಾರ ರಾತ್ರಿ ಮೀರತ್ನ ಸಾದಿಕ್ ನಗರದ ಚರಂಡಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು 250ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಯಶ್ ಸ್ಕೂಟಿಯಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು.
ಇದಾದ ಬಳಿಕ ಸ್ಥಳೀಯ ಮೂವರು ಸೇರಿಕೊಂಡು ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದು, ಆತನ ಮೃಹದೇಹವನ್ನು ಗೋಣಿಚೀಲದಲ್ಲಿ ಹಾಕಿ ಚರಂಡಿಗೆ ಎಸೆದಿದ್ದಾರೆ ಎಂದು ಮೀರತ್ನ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಭಟ್ನಾಗರ್ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಯು ಕೆಲವು ಸಲಿಂಗಕಾಮಿ ಸೈಟ್ಗಳಲ್ಲಿ ನೋಂದಾಯಿಸಲ್ಪಟ್ಟಿದ್ದನು. ಅಲ್ಲದೆ ಅವನಿಗೆ ಇತರ ಪುರುಷರೊಂದಿಗೆ ಸಂಬಂಧವಿತ್ತು. ಈ ಬಗ್ಗೆ ಇ-ಮೇಲ್ ಮೂಲಕ ಸಾಕ್ಷ್ಯಗಳು ಸಿಕ್ಕಿವೆ.
ಅಲ್ಲದೆ ವಿದ್ಯಾರ್ಥಿ ಯಶ್ ಕೆಲವು ಆಕ್ಷೇಪಾರ್ಹ ಛಾಯಾಚಿತ್ರಗಳ ಮೂಲಕ ಮೂವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಅವರಿಂದ 40,000 ರೂಪಾಯಿಗಳನ್ನೂ ವಸೂಲಿ ಮಾಡಿದ್ದ. ಹೆಚ್ಚಿನ ಹಣಕ್ಕೆ ಅವರಿಂದ ಬೇಡಿಕೆಯಿಟ್ಟಿದ್ದ. ಈ ಕಾರಣದಿಂದಾಗಿಯೇ ಮೂವರು ಸೇರಿ ಆತನನ್ನು ಕೊಂದು ಶವವನ್ನು ಚರಂಡಿಗೆ ಎಸೆದಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.