ದೆಹಲಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ ಭಾರತದ 'ಕಿರೀಟವನ್ನು' ಈಗ ಮಾರಾಟ ಮಾಡಲಾಗುತ್ತಿದೆ ಮತ್ತು ಅವುಗಳನ್ನು ತಮ್ಮ ಎರಡ್ಮೂರು ಉದ್ಯಮಿ 'ಸ್ನೇಹಿತರಿಗೆ' ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದಿದ್ದಾರೆ.
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಭಾರತದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂದಿರುವ ಬಿಜೆಪಿ ಈಗ ಆ ಅವಧಿಯಲ್ಲಿ ಸಾರ್ವಜನಿಕರ ಹಣದಿಂದ ಸೃಷ್ಟಿಯಾಗಿದ್ದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲು ಹೊರಟಿದೆ ಎಂದು ದೂರಿದ್ದಾರೆ.
ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವುದು ಕೇಂದ್ರ ಸರ್ಕಾರದ ಖಾಸಗೀಕರಣ ಯೋಜನೆಯ ಗುರಿಯಾಗಿದ್ದು, ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ. ಅನೌಪಚಾರಿಕ ವಲಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ, ಸಣ್ಣ ಉದ್ಯಮಗಳನ್ನು ನಾಶಪಡಿಸುತ್ತದೆ ಮತ್ತು ಜನರ 'ಗುಲಾಮಗಿರಿಗೆ' ಕಾರಣವಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಯುಪಿಎ ಸರ್ಕಾರವು 70 ವರ್ಷಗಳಲ್ಲಿ ನಿರ್ಮಿಸಿದ ಆರ್ಥಿಕತೆಯನ್ನು ಬಿಜೆಪಿ ಸರ್ಕಾರವು ತಪ್ಪಾಗಿ ನಿರ್ವಹಿಸಿದೆ. ಈಗ ಸ್ವಲ್ಪ ಹಣವನ್ನು ಗಳಿಸಲು ದೇಶದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದೆ. ಕಾಂಗ್ರೆಸ್ 70 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂಬುದು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಘೋಷವಾಕ್ಯವಾಗಿತ್ತು. ಈಗ ಹಣಕಾಸು ಸಚಿವರು (ನಿರ್ಮಲಾ ಸೀತಾರಾಮನ್) ಈ ಅವಧಿಯಲ್ಲಿ ನಿರ್ಮಿಸಿದ ಎಲ್ಲ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಧಾನ ಮಂತ್ರಿಗಳು ಈ ದೇಶದ ಕಿರೀಟವನ್ನೇ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ' ಎಂದು ದೂರಿದ್ದಾರೆ.
'ಈ ಸಂಪೂರ್ಣ ಖಾಸಗೀಕರಣ, ಸ್ವತ್ತುಗಳ ನಗದೀಕರಣವನ್ನು ಹಣಗಳಿಕೆಯ ಏಕಸ್ವಾಮ್ಯವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಈ ಪ್ರಕ್ರಿಯೆಯ ಹಿಂದಿನ ಸಂಪೂರ್ಣ ಆಲೋಚನೆಯು ಮೂರು ಅಥವಾ ನಾಲ್ಕು ಜನರಿಗೆ ಮಾತ್ರ ಏಕಸ್ವಾಮ್ಯವನ್ನು ಸೃಷ್ಟಿಸುವುದಾಗಿದೆ. ಈ ಕ್ರಮವನ್ನು ಯಾರಿಗಾಗಿ ರೂಪಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ' ಎಂದು ಅವರು ಹೇಳಿದರು.
ಈ ದೇಶದಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವುದು 'ಅತ್ಯಂತ ಅಪಾಯಕಾರಿ' ಎಂದ ಅವರು, 'ಈ ಮೊದಲು ನಾವು ಭಾರತದಲ್ಲಿ ಏಕಸ್ವಾಮ್ಯವನ್ನು ಕಂಡಿದ್ದೆವು. ಅದನ್ನು ಈಸ್ಟ್ ಇಂಡಿಯಾ ಕಂಪನಿ ಎಂದು ಕರೆಯಲಾಗುತ್ತಿತ್ತು. ಈ ಪದ್ಧತಿಯು ದೇಶದ ಜನರನ್ನು ಗುಲಾಮರನ್ನಾಗಿ ಮಾಡಿತು ಮತ್ತು ಈಗ ನಡೆಯುತ್ತಿರುವುದು ಇದೇ ಆಗಿದೆ. ನಾವು ಗುಲಾಮಗಿರಿಯತ್ತ ಸಾಗುತ್ತಿದ್ದೇವೆ' ಎಂದು ಆರೋಪಿಸಿದ್ದಾರೆ.
'ಇದು ಕೇವಲ ಭಾರತದ ಸ್ವತ್ತನ್ನು ಉಡುಗೊರೆಯಾಗಿ ನೀಡುತ್ತಿರುವುದಲ್ಲ, ಬದಲಿಗೆ ಭವಿಷ್ಯದಲ್ಲಿ ಭಾರತದಲ್ಲಿ ಯುವಜನರಿಗೆ ಉದ್ಯೋಗ ಸಿಗುವುದಿಲ್ಲ ಎಂಬುದನ್ನು ಇದು ತೋರಿಸುತ್ತಿದೆ'. ನೂತನ ಕೃಷಿ ಕಾನೂನುಗಳನ್ನು ಉಲ್ಲೇಖಿಸಿದ ಅವರು, 'ಇದು ಕೃಷಿಯಲ್ಲಿನ ಅನೌಪಚಾರಿಕ ವಲಯವನ್ನು ನಾಶಪಡಿಸುತ್ತದೆ ಮತ್ತು ಕೃಷಿಯಲ್ಲೂ ಏಕಸ್ವಾಮ್ಯತೆ ಸ್ಥಾಪನೆಯಾಗುವುದನ್ನು ಪ್ರೋತ್ಸಾಹಿಸುತ್ತದೆ' ಎಂದು ಹೇಳಿದರು.
ದೊಡ್ಡ ಏಕಸ್ವಾಮ್ಯವಾದಿಗಳು ಈ ದೇಶವನ್ನು ಪರಿವರ್ತಿಸಬಲ್ಲರು ಎಂದು ಪ್ರಧಾನಮಂತ್ರಿ ನಂಬಿದ್ದಾರೆ, ಆದರೆ ದೊಡ್ಡ ಏಕಸ್ವಾಮ್ಯಗಳು ಸೃಷ್ಟಿಯಾದಾಗ ಯಾವುದೇ ಉದ್ಯೋಗಗಳು ಇಲ್ಲವಾಗುತ್ತವೆ ಮತ್ತು ಇದು ಸಾಮಾಜಿಕ ಉದ್ವೇಗ, ಕೋಪ ಮತ್ತು ಸಾಮಾಜಿಕ ಸ್ಫೋಟಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ಅರಿತುಕೊಂಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಕೋವಿಡ್-19 ಆಪತ್ತನ್ನು ತರುವ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದೆ ಆದರೆ ಅದು ಅಪಹಾಸ್ಯಕ್ಕೀಡಾಯಿತು. ಸಾರ್ವಜನಿಕ ಆಸ್ತಿಗಳನ್ನು ಮಾರಿ ಹಣಗಳಿಸುವುದು ಕೂಡ ಯುವಕರಿಗೆ ಉದ್ಯೋಗ ಸಿಗದಂತೆ ಮಾಡುತ್ತದೆ ಮತ್ತು ಇಡೀ ಕೈಗಾರಿಕಾ ರಚನೆಯನ್ನೇ ಎರಡು ಅಥವಾ ಮೂರು ಜನರು ನಿಯಂತ್ರಿಸುವಂತಾಗುತ್ತದೆ' ಎಂದು ಎಚ್ಚರಿಸಿದ್ದಾರೆ.
ದೇಶದ ಮೂಲಸೌಕರ್ಯ ಯೋಜನೆಗಳಿಗೆ ಸುಸ್ಥಿರವಾಗಿ ಅನುದಾನ ಒದಗಿಸಲು ಕೇಂದ್ರ ಸರ್ಕಾರ ₹ 6 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಅನಾವರಣಗೊಳಿಸಿದ್ದು, ಈ ಯೋಜನೆ ಅಡಿಯಲ್ಲಿ ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆಮಾರ್ಗ, ವಿದ್ಯುತ್ ವಲಯದ ಯೋಜನೆಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ವರ್ಗಾಯಿಸುವ ಉದ್ದೇಶವನ್ನು ಹೊಂದಿದೆ. ಹಾಲಿ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ನಾಲ್ಕು ವರ್ಷಗಳ ಅವಧಿಯ ಯೋಜನೆ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಎನ್ಎಂಪಿ ಘೋಷಣೆ ವೇಳೆ ತಿಳಿಸಿದ್ದರು.