ಚಂಡೀಗಢ : ಕೇಂದ್ರದ ಮಾಜಿ ಸಚಿವ ಹಾಗೂ ಅಂಬಾಲಾದ ಬಿಜೆಪಿ ಸಂಸದ ರತನ್ ಲಾಲ್ ಕಟಾರಿಯಾ (71) ಗುರುವಾರ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ತಿಂಗಳುಗಳಿಂದ ರನತ್ ಅವರು ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತೊದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ರತನ್ ಕೊನೆಯುಸಿರೆಳೆದರು.
ಕಟಾರಿಯಾ ಅವರ ಪಾರ್ಥಿವ ಶರೀರವನ್ನು ಪಂಚಕುಲದ ನಿವಾಸದಲ್ಲಿ ಇರಿಸಲಾಗಿದ್ದು ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಂಜೆ ಮಣಿಮಜ್ರಾದಲ್ಲಿ ಅಂತಿಮ ವಿಧಿವಿಧಾನಗಳನ್ನು ನೇರಿವೇರಿಸಲಾಗುವುದು ಎಂಬುದಾಗಿ ಅವರ ಕುಟುಂಬದ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಕಟಾರಿಯಾ ಅವರು ಸಮಾಜದ ಹಿತಕ್ಕಾಗಿ ಮತ್ತು ಹರಿಯಾಣದ ಜನರ ಪ್ರಗತಿಗಾಗಿ ಸಂಸತ್ತಿನಲ್ಲಿ ಯಾವಾಗಲೂ ಧ್ವನಿ ಎತ್ತುತ್ತಿದ್ದರು.
ರತನ್ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ರತನ್ ನಿಧನಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಓಂ ಪ್ರಕಾಶ್ ಧನ್ಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ.