ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಲ್ಲದೇ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನ ವಿವಾಹದ ಮಂಟಪಕ್ಕೆ ಬೆಂಕಿ ಹಚ್ಚಿದ ಮಹಿಳೆಯೊಬ್ಬಳು, ನಂತರ ಆತನ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿ ಮದುವೆಯ ಉಡುಗೊರೆ ನೀಡಿದ್ದಾಗಿ ಹೇಳಿದ ಘಟನೆ ವರದಿಯಾಗಿದೆ.
33 ವರ್ಷದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ದೂರು ನೀಡಿದ್ದಾನೆ. ತನಿಖೆ ನಡೆಯುತ್ತಿರುವಾಗಲೇ ಮತ್ತೆ ಠಾಣೆಗೆ ಬಂದ ವ್ಯಕ್ತಿ, ತನ್ನ ವಿವಾಹಕ್ಕೆ ಒಂದು ದಿನ ಮುಂಚೆ ವಿವಾಹ ಮಂಟಪಕ್ಕೆ ಯಾರೋ ಬೆಂಕಿ ಹಚ್ಚಿದ್ದಾನೆ ಎಂದು ದೂರು ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿನ್ಹ ಗಾಯಕ್‌ವಾಡ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಮಹಿಳೆಯ ಸುಳಿವು ಪಡೆದ ಆಕೆಯನ್ನು ದತ್ತಾನಗರದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ದ್ವಿಚಕ್ರ ವಾಹನ ಮತ್ತು ವಿವಾಹ ಮಂಟಪಕ್ಕೆ ಬೆಂಕಿ ಹಚ್ಚಿರುವುದನ್ನು ಒಪ್ಪಿಕೊಂಡ ಮಹಿಳೆ, ಕಳೆದ ಆರು ವರ್ಷಗಳಿಂದ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವು. ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದ. ಆದರೆ, ನನಗೆ ಯಾವುದೇ ವಿವರಣೆ ನೀಡದೆ ಬೇರೆ ಮಹಿಳೆಯನ್ನು ವಿವಾಹವಾಗಲು ನಿರ್ಧರಿಸಿದ್ದರಿಂದ ನಾನು ಈ ರೀತಿ ಮಾಡಬೇಕಾಯಿತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಅದಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ಆತ ವಿವಾಹಕ್ಕೆ ಮಹಿಳೆಯನ್ನು ಆಹ್ವಾನಿಸಿದ್ದ. ಆಹ್ವಾನ ಸ್ವೀಕರಿಸಿದ ಮಹಿಳೆ, ವಧುವಿನ ಮನೆಗೆ ತೆರಳಿ ತಮ್ಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾಳೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ವಿವಾಹದ ಮಂಟಪಕ್ಕೆ ಬೆಂಕಿ ಹಚ್ಚಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.