Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ : ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿರುವುದನ್ನು ತಡೆಯಲು 24 ವರ್ಷದ ಯುವಕ ವರನ ಕೈ ತಾಳಿಯನ್ನು ಕಿತ್ತುಕೊಂಡು ಪ್ರಿಯತಮೆ ಕೊರಳಿಗೆ ಕಟ್ಟಲು ಯತ್ನಿಸಿದ್ದಾನೆ.
ಚೆನ್ನೈನ ಐಷಾರಾಮಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಈ ಮದುವೆ ನಿಲ್ಲಿಸಿ ತನ್ನನ್ನು ಹೇಗಾದರೂ ಕರೆದುಕೊಂಡು ಹೋಗುವಂತೆ ಯುವತಿ ತನ್ನ ಪ್ರಿಯಕರನಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಳು.
ಹೀಗಾಗಿ ಬೆಳಗ್ಗೆಯೇ ಮದುವೆ ಮನೆಗೆ ಎಂಟ್ರಿ ಕೊಟ್ಟ ಯುವಕ ವರ ತನ್ನ ಪ್ರಿಯತಮೆಗೆ ಕಟ್ಟಲು ಮುಂದಾಗುತ್ತಿದ್ದಂತೆ ವೇದಿಕೆ ಏರಿ ತಾಳಿಯನ್ನು ಕಿತ್ತುಕೊಂಡಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಅಲ್ಲಿದ್ದ ಜನರು ಆತನನ್ನು ತಡೆದು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಚೆನ್ನೈನ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.
ನಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಯುವಕ ಮತ್ತು ಯುವತಿ ಪ್ರೀತಿ ಮಾಡುತ್ತಿದ್ದು, ಹುಡುಗಿ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಯಾಗಲು ಮುಂದಾಗಿದ್ದಾಳೆ. ಹೀಗಾಗಿ ಪ್ರಿಯಕರ ಮದುವೆ ಮಂಟಪಕ್ಕೆ ಬಂದಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ.