ಢಾಕಾ : ಸತತ ಸುರಿಯುತ್ತಿರುವ ಮುಂಗಾರು ಮಳೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ 25 ಮಂದಿ ಸಾವನ್ನಪ್ಪಿದ್ದು, 40 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೀವ್ರ ಮಳೆಯ ಕಾರಣ ಬಾಂಗ್ಲಾ ದೇಶಾದ್ಯಂತ ಪ್ರೌಢಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಾಲಾ ತರಗತಿ ಕೊಠಡಿಗಳಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.
ಕೆಲ ಹಳ್ಳಿಗಳು ಕೆಲ ಗಂಟೆಗಳಲ್ಲೇ ಮುಳುಗಿ ಹೋಗಿದ್ದು, ಶಾಲೆಗಳನ್ನೇ ಆಶ್ರಯತಾಣವಾಗಿ ಮಾಡಿಕೊಳ್ಳಲಾಗಿದೆ. ಕೆಲವರು ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಂಡರೆ, ಇನ್ನೂ ಕೆಲವರು ನೀರಿನ ದಡದಲ್ಲೇ ಪ್ರಾಣ ಉಳಿಸಿಕೊಳ್ಳಲು ತವಕಿಸುತ್ತಿದ್ದಾರೆ.
ಹಳ್ಳಿ-ಹಳ್ಳಿಗಳನ್ನು ಸುತ್ತುವರಿದಿರುವ ನೀರಿನಿಂದಾಗಿ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಕಾರ್ಯಾಚರಣೆಗೆ ಇಳಿದಿರುವ ಸೇನೆಯು ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುತ್ತಿದೆ. ನಿನ್ನೆ ಒಂದೇ ದಿನ 21 ಮಂದಿ ಮೃತಪಟ್ಟಿದ್ದು, ಈವರೆಗೆ 25 ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.