ಲಕ್ನೋ : ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಯೋಧ್ಯೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಮಥುರಾದಲ್ಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಲಪಂಥೀಯ ಗುಂಪುಗಳಾದ ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀಕೃಷ್ಣ ಜನ್ಮಭೂಮಿ ನಿರ್ಮಾಣ ನ್ಯಾಸ್, ನಾರಾಯಣಿ ಸೇನೆ ಮತ್ತು ಶ್ರೀಕೃಷ್ಣ ಮುಕ್ತಿ ದಳಗಳು ಅನುಮತಿ ಕೋರಿದ್ದವು.
ಕೃಷ್ಣನ ಜನ್ಮಸ್ಥಳ ಇಲ್ಲಿನ ಪ್ರಮುಖ ದೇವಾಲಯದ ಸಮೀಪವಿರುವ ಮಸೀದಿಯಲ್ಲಿದೆ ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ತೀರಸ್ಕರಿಸಿ, ಶಾಂತಿ ಕದಡುವ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಮಥುರಾದಲ್ಲಿ ನಿಷೇಧಾಜ್ಞೆಗಳು ಜಾರಿಗೊಳಿಸಲಾಗಿದೆ. ಜೊತೆಗೆ ಹೆಚ್ಚಿನ ಭದ್ರತೆಗಾಗಿ ಮಥುರಾವನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕತ್ರ ಕೇಶವ ದೇವ್ ದೇವಸ್ಥಾನ ಮತ್ತು ಶಾಹಿ ಈದ್ಗಾ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ. ಅಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪ್ರವೇಶ ಕೇಂದ್ರಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.