ನವದೆಹಲಿ: ಅಮೆರಿಕಾದ ಟೆಕ್ಸಾಸ್ ವಿವಿಯಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ. ಚೀನಾದಲ್ಲಿ ನಿರುದ್ಯೋಗ ಎನ್ನುವುದೇ ಇಲ್ಲ ಎಂದಿದ್ದರು.
ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ ರಾಹುಲ್ ಗಾಂಧಿ ಹೇಳಿದಂತೆ ನಿಜವಾಗಿಯೂ ಚೀನಾದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲವೇ? ಅಲ್ಲಿನ ನಿರುದ್ಯೋಗ ಶೇಕಡಾವಾರು ಮತ್ತು ಭಾರತದಲ್ಲಿ ನಿರುದ್ಯೋಗ ಶೇಕಡಾವಾರು ಎಷ್ಟಿದೆ ಎಂಬ ವಿವರ ಇಲ್ಲಿದೆ ನೋಡಿ.
ಇತ್ತೀಚೆಗಿನ ಅಂಕಿ ಅಂಶದ ಪ್ರಕಾರ ಚೈನಾದಲ್ಲಿ ನಿರುದ್ಯೋಗ ಪ್ರಮಾಣ ಶೇ.5.1 ರಷ್ಟಿದೆ. ಕೇವಲ ಮೂರು ತಿಂಗಳ ಮೊದಲು ಇದು ಶೇ.5 ರಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದು ಕೊಂಚ ಏರಿಕೆಯಾಗಿದೆ. ಅದರಲ್ಲೂ ಕೆಲವು ಪ್ರಮುಖ ನಗರಗಳಲ್ಲಿ ಶೇ.5.3 ರವರೆಗಿದೆ ಎನ್ನಲಾಗುತ್ತದೆ. 2024 ರಲ್ಲಿ ಚೀನಾದಲ್ಲಿ ನಿರುದ್ಯೋಗ ಪ್ರಮಾಣ ಶೇ.5.30 ರಷ್ಟಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ಇದು ಕೊಂಚ ಇಳಿಕೆಯಾಗಿ ಶೇ.5 ಕ್ಕೆ ತಲುಪಿತ್ತು. ಆದರೆ ಜುಲೈ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಶೇ.5.20 ರವರೆಗೆ ತಲುಪಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂದರೆ ತಪ್ಪಾಗುತ್ತದೆ.
ಆದರೆ ಚೀನಾಗೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ಶೇಕಡಾವಾರು ಕೊಂಚ ಹೆಚ್ಚಿದೆ. ಇಲ್ಲಿ 2024 ಜೂನ್ ಅಂಕಿ ಅಂಶದ ಪ್ರಕಾರ ನಿರುದ್ಯೋಗ ಶೇಕಡಾವಾರು 9.2 ಕ್ಕೆ ತಲುಪಿದೆ. ಇದು ಕಳೆದ ಎಂಟು ತಿಂಗಳಲ್ಲೇ ಅಧಿಕವಾಗಿದೆ. 2023 ರಲ್ಲಿ ನಿರುದ್ಯೋಗ ಪ್ರಮಾಣ ಶೇ.8 ರಷ್ಟಿತ್ತು. ಅದೀಗ ಮತ್ತಷ್ಟು ಏರಿಕೆಯಾಗಿದೆ ಎಂಬುದು ಕಳವಳಕಾರಿ ವಿಷಯವಾಗಿದೆ.