ದೇರಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ, ಇದು ಅಂತಿಂಥಾಪ್ರಕರಣವಲ್ಲ. ಬರೋಬ್ಬರಿ 16 ವರ್ಷಗಳ ಕಾಲ ವಿಚಾರಣೆ ನಡೆದ ಪ್ರಕರಣ.
ವಾಜಪೇಯಿಗೆ ಬಂದಿತ್ತು ಅನಾಮಧೇಯ ಪತ್ರ: 2002ರಲ್ಲಿ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಗೆ ಅನಾಮಧೇಯ ಪತ್ರ ಬಂದಿತ್ತು. ಸಾಧ್ವಿಯೊಬ್ಬರು ಬರೆದಿದ್ದ ಆ ಪತ್ರದಲ್ಲಿ ದೇರಾ ಮುಖ್ಯಸ್ಥನ ಕಾಮಕಾಂಡದ ವಿವರಣೆ ಇತ್ತು. ತಾನು ಸೇರಿದಂತೆ ಹಲವಾರು ಸಾಧ್ವಿಗಳ ಮೇಲೆ ದೇರಾ ಮುಖ್ಯಸ್ಥ ಅತ್ಯಾಚಾರ ನಡೆಸಿದ್ದಾನೆಂದು ಉಲ್ಲೇಖಿಸಲಾಗಿತ್ತು.
ಒಂದು ದಿನ ರಾತ್ರಿ ರಾಮ್ ರಹೀಮ್ ತನ್ನ ಕೊಠಡಿಗೆ ಕರೆದಿದ್ದ. ನಾನು ಕೊಠಡಿಗೆ ಹೋದಾಗ ರಿವಾಲ್ವರ್ ಹಿಡಿದಿದ್ದ ರಾಮ್ ರಹೀಮ್, ಪೋರ್ನೋಗ್ರಫಿ ನೋಡುತ್ತಿದ್ದ. ನನ್ನ ಬರಸೆಳೆದು ಅತ್ಯಾಚಾರ ನಡೆಸಿದ. 3 ವರ್ಷಗಳ ಕಾಲ ನನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ. 40ಕ್ಕು ಅಧಿಕ ಸಾಧ್ವಿಗಳು ಅವನ ಕಾಮತೃಷೆಗೆ ಬಲಿಯಾಗಿದ್ಧಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಧಾನಿಗೆ ಬಂದ ಅನಾಮಧೇಯ ಪತ್ರದ ಆಧಾರದ ಮೇಲೆ ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿತು. ಸೆಪ್ಟೆಂಬರ್ 2002ರಲ್ಲಿ ಪ್ರಕರಣವನ್ನ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸಾಧ್ವಿ ಪತ್ರದಲ್ಲಿ ಉಲ್ಲೇಖಿಸಿದ್ದ 18 ಸಾಧ್ವಿಗಳನ್ನ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಸೆಕ್ಷನ್ 164ರಡಿ ಕೇಸ್ ದಾಖಲಿಸಿದ್ದ ಸಿಬಿಐ ಎಲ್ಲ ಸಾಕ್ಷ್ಯಗಳನ್ನ ಕಲೆ ಹಾಕಿತ್ತು.
ದೂರು ದಾಖಲಾದ ಬಳಿಕ 5 ವರ್ಷಗಳು ಸುದೀರ್ಘ ತನಿಖೆ ನಡೆಸಿದ್ದ ಸಿಬಿಐ 2007ರ ಜುಲೈ 30ರಂದು ಚಾರ್ಜ್ ಸೀಟ್ ಸಲ್ಲಿಸಿತ್ತು. 2008ರಲ್ಲಿ ಕೋರ್ಟ್ ವಿಚಾರಣೆ ಆರಂಭಿಸಿದ ಬಳಿಕ ಸೆಕ್ಷನ್ 376, 506 ಅನ್ನ ಸೇರಿಸಲಾಯ್ತು. ಆದರೆ, ಅತ್ಯಾಚಾರ ಎಸಗಲು ದೈಹಿಕವಾಗಿ ನಾನು ಸಮರ್ಥನಲ್ಲ, ಲೈಂಗಿಕ ಕ್ರಿಯೆ ನಡೆಸಲು ನನ್ನಿಂದ ಸಾಧ್ಯವಿಲ್ಲವೆಂದು ದೇರಾ ಮುಖ್ಯಸ್ಥ ಹೊಸ ತಂತ್ರ ರೂಪಿಸಿದ್ದ.
ಪ್ರಕರಣದ ವಿಚಾರಣೆ ಸಂದರ್ಭದಲ್ಲೇ ಸಾಧ್ವಿಗೆ ದೂರು ನೀಡಲು ಸಹಕರಿಸಿದ್ದ ದೇರಾ ಸಚ್ಚಾ ಸೌಧದ ಸದಸ್ಯ ರಂಜೀತ್ ಸಿಂಗ್, ಪತ್ರಕರ್ತ ರಾಮ್ ಚಂದರ್ ಚತ್ರಪತಿಯ ಹತ್ಯೆ ಮಾಡಲಾಗಿತ್ತು. ಆದರೂ ಸುದೀರ್ಘ ವಿಚಾರಣೆ ಬಳಿಕ ರಾಮ್ ರಹೀಮ್ ಸಿಂಗ್ ದೋಷಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ