ಭಾರತೀಯ ಅತ್ಯಂತ ಖ್ಯಾತ ಅಂಬಾಸಿಡರ್ ಕಾರುಗಳ ಕಥೆ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದವರಿಗೆ ಒಂದು ಸಿಹಿ ಸುದ್ದಿ ಬಂದಿದೆ. ಹೌದು, ಭಾರತೀಯ ರಸ್ತೆಗಳಲ್ಲಿ ಏಕಸ್ವಾಮ್ಯ ಹೊಂದಿದ್ದ ಅಂಬಾಸಿಡರ್ ಕಾರು ಮತ್ತೆ ಮಾರುಕಟ್ಟೆಗೆ ಬರುತ್ತಿದೆ.
ಅಂಬಾಸಿಡರ್ ಕಾರು ತಯಾರಕ ಸಂಸ್ಥೆ ಹಿಂದೂಸ್ತಾನ್ ಮೋಟರ್ಸ್ ಭಾರತೀಯ ಮಾರುಕಟ್ಟೆಗೆ ಮರಳಲು ಸಿದ್ಧತೆ ನಡೆಸಿದ್ದು, ಈ ಬಾರಿ ಎಲೆಕ್ಟ್ರಿಕ್ ರೂಪದಲ್ಲಿ ಅಂಬಾಸಿಡರ್ ಕಾರುಗಳು ರಸ್ತೆಗಿಳಿಯಲು ಸಜ್ಜಾಗಿವೆ.
ಕಂಪನಿ ಈಗಾಗಲೇ ಯೂರೋಪ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು ಅದರ ಭಾಗವಾಗಿ ಈ ಸ್ಕೂಟರ್ ಗಳನ್ನು ಮೊದಲು ಮಾರುಕಟ್ಟೆಗೆ ಪರಿಚಯಿಸಲಿದ್ದು, ನಂತರ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಉಭಯ ಕಂಪನಿಗಳು ಎಂಒಯುಗೆ ಸಹಿ ಹಾಕಿದ್ದು ಪಾಲುದಾರಿಕೆ ಪ್ರಕ್ರಿಯೆ ಮೂರು ತಿಂಗಳಲ್ಲಿ ಮುಗಿಯುವ ಕಾರಣ ನಂತರ ಅಧಿಕೃತ ಪ್ರಕಟನೆ ಹೊರಡಿಸಲಿದೆ ಎಂದು ಕಂಪನಿಯ ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ. ಕಂಪನಿಯು ಶೇಕಡಾ 51ರಷ್ಟು ಪಾಲನ್ನು ಹೊಂದಲಿದ್ದು ಉಳಿದ 49 ಪಾಲನ್ನು ಯೂರೋಪ್ ಮೂಲದ ಕಂಪನಿ ಹೊಂದಲಿದೆ ಎಂದು ಹೇಳಲಾಗುತ್ತಿದೆ.