ನವದೆಹಲಿ : 22 ರಾಜ್ಯಗಳಲ್ಲಿ ಬಿಸಿನೆಸ್ ಮಾಡುತ್ತಿದ್ದೇವೆ. ಎಲ್ಲವನ್ನೂ ಬಿಜೆಪಿ ಜೊತೆ ಮಾಡುತ್ತಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ತಿಳಿಸಿದ್ದಾರೆ.
ನಾವು ದೇಶದ ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಅದಾನಿ ಗುಂಪು ಇಂದು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಈ ಎಲ್ಲಾ ರಾಜ್ಯಗಳು ಬಿಜೆಪಿ ಆಡಳಿತದಲ್ಲಿಲ್ಲ.
ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಎಡಪಕ್ಷಗಳ ಆಡಳಿತವಿರುವ ಕೇರಳ, ಮಮತಾ ದೀದಿಯವರ ಪಶ್ಚಿಮ ಬಂಗಾಳ, ನವೀನ್ ಪಟ್ನಾಯಕ್ ಅವರ ಒಡಿಶಾ, ಜಗನ್ಮೋಹನ್ ರೆಡ್ಡಿ ಅವರ ಆಂಧ್ರಪ್ರದೇಶ, ಕೆಸಿಆರ್ ರಾಜ್ಯದಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಹೂಡಿಕೆ ನಮ್ಮ ಸಾಮಾನ್ಯ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಹ್ವಾನದ ಮೇರೆಗೆ ನಾನು ರಾಜಸ್ಥಾನ ಹೂಡಿಕೆದಾರರ ಶೃಂಗಸಭೆಗೆ ಹೋಗಿದ್ದೆ. ನಂತರ ರಾಹುಲ್ ಗಾಂಧಿ ಅವರು ಕೂಡ ರಾಜಸ್ಥಾನದಲ್ಲಿ ನಮ್ಮ ಹೂಡಿಕೆಯನ್ನು ಶ್ಲಾಘಿಸಿದ್ದಾರೆ.