ನವದೆಹಲಿ(ಜು.30): ಉಡಾನ್ ಯೋಜನೆ ಮುಖಾಂತರ ಸಣ್ಣ ನಗರಗಳ ಮಧ್ಯೆ ವಿಮಾನ ಸೇವೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ಇದೀಗ ವಾಹನಗಳ ಮುಖಾಂತರ ಸಂಪರ್ಕಕ್ಕೆ ಅಸಾಧ್ಯವಾದ ಪ್ರದೇಶಗಳ ಮಧ್ಯೆ ವಿಮಾನ ಸೇವೆ ಉತ್ತೇಜನಕ್ಕೆ ಮುಂದಾಗಿದೆ. ಇದಕ್ಕಾಗಿ ಸಣ್ಣ ವಿಮಾನ ನಿಲ್ದಾಣಗಳ ಆರಂಭಕ್ಕೆ ಉತ್ತೇಜಿಸುವ ಕೇಂದ್ರದ ಮಸೂದೆಯೊಂದಕ್ಕೆ ಲೋಕಸಭೆ ಗುರುವಾರ ಅನುಮೋದನೆ ನೀಡಿದೆ.
* ಉಡಾನ್ ಯೋಜನೆ ಮುಖಾಂತರ ಸಣ್ಣ ನಗರಗಳ ಮಧ್ಯೆ ವಿಮಾನ ಸೇವೆಗೆ ಚಾಲನೆ
* ವಾಹನಗಳ ಮುಖಾಂತರ ಸಂಪರ್ಕಕ್ಕೆ ಅಸಾಧ್ಯವಾದ ಪ್ರದೇಶಗಳ ಮಧ್ಯೆ ವಿಮಾನ ಸೇವೆ ಉತ್ತೇಜನ
* ಸಣ್ಣ ವಿಮಾನ ನಿಲ್ದಾಣಗಳ ಆರಂಭಕ್ಕೆ ಉತ್ತೇಜಿಸುವ ಕೇಂದ್ರದ ಮಸೂದೆಯೊಂದಕ್ಕೆ ಅನುಮೋದನೆ
ಪೆಗಾಸಸ್ ಮತ್ತು ಕೃಷಿ ಕಾಯ್ದೆಗಳ ವಿರುದ್ಧದ ವಿಪಕ್ಷಗಳ ಗದ್ದಲ ಮತ್ತು ಪ್ರತಿಭಟನೆ ವೇಳೆಯೇ ಲೋಕಸಭೆಯಲ್ಲಿ ಯಾವುದೇ ಚರ್ಚೆಗಳಿಲ್ಲದೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಮಸೂದೆ-2021ಗೆ ಕೇಂದ್ರ ಸರ್ಕಾರ ಅನುಮೋದನೆ ಪಡೆದುಕೊಂಡಿತು.
ಈ ವೇಳೆ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿಮಾನಯಾನ ಸೇವೆಗಳನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ ಎಂದರು.