ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಗಡಿ ನಿರ್ಧಾರವಾಗಲಿದ್ದು, ಚುನಾವಣೆ ಮುಗಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸಲಾಗುತ್ತದೆ.
ನಾನು ಕಾಶ್ಮೀರಿ ಯುವಕರೊಂದಿಗೆ ಸ್ನೇಹದಿಂದ ಇರಲು ಬಯಸುತ್ತೇನೆ. ಗಡಿ ನಿರ್ಧಾರದ ಪ್ರಕ್ರಿಯೆ ಮುಗಿದು ಚುನಾವಣೆ ಆದ ಬಳಿಕ ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವವನ್ನು ವಾಪಾಸ್ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
3 ದಿನಗಳ ಕಾಲ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರದಲ್ಲಿ ಇಂದು ಶ್ರೀನಗರ- ಶಾರ್ಜಾ ನೇರ ವಿಮಾನಸೇವೆಯನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ಅಡಿಯ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಲಾಗಿತ್ತು. ಆ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ತೆರೆಬಿದ್ದಿತು. ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಜಮ್ಮು ಕಾಶ್ಮೀರದ ಯುವಕರು ಕೈಜೋಡಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.