ಆರೋಪಿ ಆಲಂ ಖಾನ್ 12 ವರ್ಷದ ಪುಟ್ಟ ಬಾಲಕನಾಗಿದ್ದಾಗ, ಆತನ ತಂದೆ ಶೋಯಬ್ ಖಾನ್‌ನಿಂದ ಹತ್ಯೆಯಾಗಿದ್ದನ್ನು ನೋಡಿದ್ದ. ಅಪ್ಪನನ್ನು ಕೊಂದ ಶೋಯಬ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆಲಂಖಾನ್ ಬರೊಬ್ಬರಿ 12 ವರ್ಷಗಳಿಂದ ಹೊಂಚು ಹಾಕುತ್ತಿದ್ದ. ಇದೀಗ ದೊರೆತ ಅಪ್ಪನನ್ನು ಕೊಂದ ಹಂತಕನನ್ನು ಆರೋಪಿ ಹತ್ಯೆಗೈದು ಸೇಡು ತೀರಿಸಿಕೊಂಡಿದ್ದಾನೆ.
ಕಳೆದ ವಾರ ಆತನಿಗೆ ಮದ್ಯದ ಆಮಿಷ ತೋರಿಸಿ ತನ್ನ ಮನೆಗೆ ಕರೆದ ಆಲಂ ಹರಿತವಾದ ಆಯುಧದಿಂದ ಕೊಂದು 12 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿ ನದಿಗೆಸೆದ. ನದಿ ದಂಡೆಗೆ ಶವದ ತುಂಡುಗಳು ಬಿದ್ದಿರುವುದರ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ದೇಹದ ಮೇಲಿದ್ದ ಶಸ್ತ್ರಚಿಕಿತ್ಸೆಯಿಂದಾದ ಗುರುತು ನೋಡಿ ಮೃತನ ಗುರುತನ್ನು ಪತ್ತೆ ಹಚ್ಚಿದರು.
ಕೊಲೆಗಾರನನ್ನು 24 ವರ್ಷದ ಯುವಕ ಆಲಂ ಖಾನ್ ಎಂದು ಗುರುತಿಸಲಾಗಿದ್ದು, ಆತ ಶೋಯಬ್ ಕಲಾಮ್ ಎಂಬಾತನನ್ನು ಭೀಕರವಾಗಿ ಕೊಲೆಗೈದಿದ್ದಾನೆ.
ಹಾವಿನ ದ್ವೇಷ ಹನ್ನೆರಡು ವರುಷ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಯುವಕ ಕೂಡ 12 ವರ್ಷದ ಸೇಡನ್ನು ತೀರಿಸಿಕೊಂಡಿದ್ದಾನೆ. ತಾನು 12 ವರ್ಷದವನಿದ್ದಾಗ ತನ್ನ ಅಪ್ಪನ ಕೊಂದವನನ್ನು ಬರೊಬ್ಬರಿ 12 ವರ್ಷಗಳ ನಂತರ ಕೊಂದಿದ್ದಾನೆ. ಅಷ್ಟೇ ಅಲ್ಲ ಆತನನ್ನು 12 ತುಂಡುಗಳಾಗಿ ಕತ್ತರಿಸಿದ್ದಾನೆ. ಉತ್ತರಪ್ರದೇಶ ಮೊರಾದಾಬಾದ್‌ನಲ್ಲಿ ಈ ಕರಾಳ ಘಟನೆ ನಡೆದಿದೆ.
ಶೋಯಬ್ ಆಲಂ ಮನೆಗೆ ಹೋಗಿದ್ದನ್ನು ಕೆಲವು ನೋಡಿದ್ದು ಅವರ ಹೇಳಿಕೆಯ ಆಧಾರದ ಮೇಲೆ ಆಲಂನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ನನ್ನ ತಂದೆಯನ್ನು ಕೊಂದವರು ಯಾರು ಎಂದು ನಾನು ಯಾರಿಗೂ ಹೇಳಿರಲಿಲ್ಲ. ಬದಲಾಗಿ ಆತನನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದೆ.
ನನ್ನ ಕನಸನ್ನು ನನಸಾಗಿಸಿಕೊಳ್ಳಲು ಬರೊಬ್ಬರಿ 12 ವರ್ಷ ಕಾದೆ. ಆತನನ್ನು ನನ್ನ ಮನೆಗೆ ಕರೆದು ಕೊಲೆಗೈದೆ. ಬಳಿಕ ಮ್ಯೂಸಿಕ್‌ನ್ನು ದೊಡ್ಡ ವಾಲ್ಯೂಮ್‌ನಲ್ಲಿ ಹಾಕಿ ಶವವನ್ನು 12 ತುಂಡುಗಳಾಗಿ ಕತ್ತರಿಸಿದೆ. ನನ್ನ ಕನಸನ್ನು ನನಸಾಗಿಸಿಕೊಂಡ ಸಂತೋಷ ನನಗಿದೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.