ಕೊಳದಲ್ಲಿ ಈಜಲು ಹೋದ ಮೂರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಂಭವಿಸಿದೆ.
ಬಟ್ಟೆ ತೊಳೆಯಲೆಂದು ಕೊಳದಲ್ಲಿ ಇಳಿದಿದ್ದಾಗ ಒಬ್ಬ ಬಾಲಕ ನೀರಿಗೆ ಕಾಲು ಜಾರಿ ಬಿದ್ದಿದ್ದು ಆತನನ್ನು ರಕ್ಷಿಸಲು ಇತರರು ಒಬ್ಬರ ಮೇಲೆ ಒಬ್ಬರಂತೆ ನೀರಿಗೆ ಧುಮುಕ್ಕಿದ್ದಾರೆ. ಇದರಿಂದ 5 ಜನ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ದೊಂಬಿವಿಲ್ಲಿ ಪಟ್ಟಣದ ಸಂದಪ್ ಗ್ರಾಮದಲ್ಲಿ ಶನಿವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮಹಿಳೆಯರು ಮಕ್ಕಳೊಂದಿಗೆ ಕೊಳದಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು.
ಘಟನೆಯಲ್ಲಿ ಮೀರಾ ಗಾಯಕ್ವಾಡ್ (55), ಸೊಸೆ ಅಪೇಕ್ಷಾ (30) ಹಾಗೂ ಮೊಮ್ಮಕ್ಕಳಾದ ಮಯೂರ್ಷ್ (15), ಮೋಕ್ಷಾ (13) ಮತ್ತು ನಿಲೇಶ್ (15) ಮೃತಪಟ್ಟ ದುರ್ದೈವಿಗಳು.
ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾಗ ಕೊಳದ ಸಮೀಪ ಕೂತಿದ್ದ ಒಬ್ಬ ಬಾಲಕ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಕೂಡಲೇ ಮಹಿಳೆಯರು ರಕ್ಷಣೆಗೆ ದೌಡಾಯಿಸಿದ್ದಾರೆ. ಅವರ ನೆರವಿಗೆ ಇತರೆ ಇಬ್ಬರು ಮಕ್ಕಳು ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.