ದೇಶದಲ್ಲಿ ಕಲ್ಲಿದ್ದಲು ಅಭಾವದ ಹಿನ್ನೆಲೆಯಲ್ಲಿ ತುರ್ತು ಪೂರೈಕೆಗಾಗಿ 42 ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಿ ಕಲ್ಲಿದ್ದಲು ತುಂಬಿದ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದೇಶದಲ್ಲಿ ಬಿಸಿಲು ಪ್ರಮಾಣ ಹೆಚ್ಚಾಗಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ರಾಜಧಾನಿ ದೆಹಲಿಯಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ.
ದೇಶದೆಲ್ಲೆಡೆ ಕಲ್ಲಿದ್ದಲು ಪೂರೈಕೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಹಲವು ಪ್ರಮುಖ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕಲ್ಲಿದ್ದಲು ಪೂರೈಕೆಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ 1000 ಬೋಗಿಗಳನ್ನು ವ್ಯವಸ್ಥೆ ಮಾಡಿದೆ. ಅಲ್ಲದೇ ಇದು ಅತ್ಯಂತ ವೇಗವಾಗಿ ನಿಗದಿತ ಸ್ಥಳ ತಲುಪಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ.
ವಿದ್ಯುತ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶೇ.17ರಷ್ಟು ಕಲ್ಲಿದ್ದಲು ಬೇಡಿಕೆ ದಿಢೀರ್ ಹೆಚ್ಚಾಗಿರುವುದರಿಂದ ಕಲ್ಲಿದ್ದಲು ಕೊರತೆ ಎದುರಿಸುವಂತಾಗಿದೆ.