ನವದೆಹಲಿ: ಇಂದಿರಾ ಗಾಂಧಿ ಹತ್ಯೆ ಬಳಿಕ 1984 ರಲ್ಲಿ ನಡೆದಿದ್ದ ಸಿಖ್ಖರ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಸಾಧ್ಯವಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೊಂಡಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಐಕೆ ಗುಜ್ರಾಲ್ ಅವರ 100 ನೇ ಜನ್ಮದಿನ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಸಿಖ್ಖರ ದಂಗೆ ನಿಭಾಯಿಸಲು ಅಂದು ಗುಜ್ರಾಲ್ ಅವರು ಸೇನೆಯ ಸಹಾಯ ಪಡೆಯುವಂತೆ ಹೇಳಿದ್ದರು. ಆದರೆ ಅವರ ಸಲಹೆಗೆ ಕಿವಿಗೊಡದೇ ಅನಾಹುತವಾಯಿತು ಎಂದು ಒಪ್ಪಿಕೊಂಡಿದ್ದಾರೆ.
ಅಂದಿನ ಗೃಹಸಚಿವರಾಗಿದ್ದ ಪಿ ವಿ ನರಸಿಂಹರಾವ್ ಬಳಿ ಗುಜ್ರಾಲ್ ಸೇನೆ ಬಳಸುವಂತೆ ಸಲಹೆ ನೀಡಿದ್ದರು. ಆದರೆ ಯಾರೂ ಅವರ ಮಾತಿಗೆ ಕಿವಿಗೊಡಲಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ಒಂದು ವೇಳೆ ಅಂದು ಗುಜ್ರಾಲ್ ಸಲಹೆಯಂತೆ ನಡೆದುಕೊಂಡಿದ್ದರೆ ಸಿಖ್ಖರ ಮಾರಣಹೋಮ ತಪ್ಪಿಸಬಹುದಾಗಿತ್ತು ಎಂದಿದ್ದಾರೆ.