ಮುಂಬೈ: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಮೈದಾನ ಜಗತ್ತಿನ ಅತೀ ದೊಡ್ಡ ಮೈದಾನ ಎಂಬ ಖ್ಯಾತಿಗೆ ಒಳಪಡಲಿದೆ. ಈ ಮೈದಾನ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.
ಸದ್ಯದಲ್ಲೇ ನಿರ್ಮಾಣ ಕಾರ್ಯ ಮುಗಿದು ಉದ್ಘಾಟನೆಗೆ ಸಿದ್ಧವಾಗಲಿರುವ ಮೈದಾನವನ್ನು ವಿಶೇಷ ಪಂದ್ಯದ ಮೂಲಕ ಲೋಕಾರ್ಪಣೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವಿನ ಪಂದ್ಯವನ್ನು ಮುಂದಿನ ವರ್ಷ ನಡೆಸಲು ಬಿಸಿಸಿಐ ಐಸಿಸಿ ಬಳಿ ಅನುಮತಿ ಕೇಳಿದೆ.
ಈ ಪಂದ್ಯವನ್ನು ಇದೇ ಮೈದಾನದಲ್ಲಿ ಆಯೋಜಿಸುವ ಮೂಲಕ ಬೃಹತ್ ಮೈದಾನದ ಉದ್ಘಾಟನೆ ಮಾಡುವ ಯೋಚನೆ ಬಿಸಿಸಿಐಗಿದೆ. ಈ ಮೈದಾನದಲ್ಲಿ 1.1 ಲಕ್ಷ ಜನ ಏಕಕಾಲಕ್ಕೆ ಕೂತು ಪಂದ್ಯ ವೀಕ್ಷಿಸಬಹುದಾಗಿದೆ. ಇದುವರೆಗೆ 90 ಸಾವಿರ ಪ್ರೇಕ್ಷಕರಿಗೆ ಸ್ಥಳಾವಕಾಶವಿರುವ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಜಗತ್ತಿನ ಅತೀ ದೊಡ್ಡ ಮೈದಾನವೆನಿಸಿಕೊಂಡಿದೆ.