Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಕ್ಷಗಾನದ ಸುತ್ತ ಒಂದು ಸುತ್ತು...!

ಯಕ್ಷಗಾನದ ಸುತ್ತ ಒಂದು ಸುತ್ತು...!

ಗುರುಮೂರ್ತಿ

ಬೆಂಗಳೂರು , ಸೋಮವಾರ, 29 ಜನವರಿ 2018 (17:39 IST)
ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲು ತೀರ, ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿ ಇಲ್ಲಿ ಒಂದು ವಿಶೇಷತೆ ಇದೆ ಅದುವೇ ಯಕ್ಷಗಾನ.

ಹೌದು ತಂಪಾದ ಇಳಿಸಂಜೆಯಲ್ಲಿ ಚಂಡೆ ಮದ್ದಲೆಯ ಶಬ್ದದ ನಡುವೆ ಭಾಗವತರ ತಾಳ ಸುಶ್ರಾವ್ಯ ಹಾಡುಗಾರಿಕೆಯಿಂದ ವೇಷ-ಭೂಷಣಗಳನ್ನು ತೊಟ್ಟ ಪಾತ್ರಧಾರಿಗಳ ಆಂಗಿಕಾಭಿನಯ, ನೃತ್ಯಾಭಿನಯ ಮತ್ತು ಮಾತುಗಾರಿಕೆಯ ಮೂಲಕ ಕಥೆಯನ್ನು ಹೇಳುತ್ತಾ ಶುರುವಾಗುವ ಈ ಯಕ್ಷಗಾನವನ್ನು ನೋಡಲೆಂದೇ ಕರಾವಳಿಯಲ್ಲಿ ಜನರ ದಂಡು ಸೇರುತ್ತದೆ.

ಯಕ್ಷಗಾನ ಎಂದರೆ ಸಾಕು ದೂರದ ಊರುಗಳಿಗೂ ತೆರಳಿ ಅದನ್ನು ವೀಕ್ಷಿಸುವ ಅಭಿಮಾನಿ ವರ್ಗವನ್ನು ನಾವು ಇಂದಿಗೂ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗದಲ್ಲಿ ಕಾಣಬಹುದು. ತನ್ನ ಕಲೆಯ ಸೊಗಡಿನಿಂದಲೇ ವಿಶ್ವದಲ್ಲೆಡೆ ಪಸರಿಸುತ್ತಿರುವ ಈ ಅದ್ಭುತ ಕಲೆಗೆ ಇತ್ತೀಚಿನ ದಿನಗಳಲ್ಲಿ ನಗರ ನಿವಾಸಿಗಳು ಇದರ ಗೀಳು ಹಚ್ಚಿಕೊಂಡಿರುವುದು ಈ ಕಲೆಯ ಶಕ್ತಿ ಎಂದೇ ಹೇಳಬಹುದು.
 
ಯಕ್ಷಗಾನ ಎಂಬುದು ಕರಾವಳಿಯ ಅದ್ಭುತ ಕಲೆಗಳಲ್ಲಿ ಒಂದಾಗಿದ್ದು ಅದನ್ನು ನೋಡುವುದೇ ಒಂದು ಸೊಬಗು. ಪುರಾಣದ ಕಥೆಗಳನ್ನು ಎಳೆಎಳೆಯಾಗಿ ತನ್ನದೇ ಭಾಷಾ ಸಾಹಿತ್ಯದಲ್ಲಿ ಬೆಸೆದು ಹಾಡುವ ಪರಿ ಎಂತಹವರನ್ನಾದರೂ ಮೋಡಿ ಮಾಡದೇ ಇರಲಾರದು. ರಂಗಸ್ಥಳ ಮತ್ತು ಅದರ ಸುತ್ತ ಜಗಮಗಿಸುವ ಬೆಳಕಿನ ಹಿಂದೆ ಕುಳಿತಿರುವ ಹಿಮ್ಮೇಳ ಮುಂಭಾಗದಲ್ಲಿ ವೇಷಗಳನ್ನು ಹಾಕಿಕೊಂಡು ಆರ್ಭಟಿಸುವ ಯಕ್ಷ ವೇಷಧಾರಿಗಳನ್ನು ನೋಡುತ್ತಾ ಸಮಯವಾಗುವುದೇ ತಿಳಿಯುವುದಿಲ್ಲ. ಅದರಲ್ಲೂ ಕಥೆಗಳ ಮೂಲಕವೇ ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ, ಇಂದು ದೇಶದೆಲ್ಲೆಡೆ ಪ್ರಚಾರಗೊಂಡು ತನ್ನದೇ ಹಿರಿಮೆಯ ಮೂಲಕ ಕನ್ನಡದ ಜಾನಪದ ಲೋಕದ ಜನಪ್ರಿಯ ಕಲೆ ಎಂಬ ಹೆಗ್ಗಳಿಕೆಯೊಂದಿಗೆ ಮುಂದೆ ಸಾಗುತ್ತಿದೆ ಈ ರಮ್ಯಾದ್ಭುತ ಕಲೆ. 
 
ಯಕ್ಷಗಾನದ ಹಿನ್ನಲೆ 
 
ಸಾರ್ಣದೇವನ "ಸ೦ಗೀತ ರತ್ನಾಕರ" ದಲ್ಲಿ (ಕ್ರಿಶ 1210) ರಲ್ಲಿ ಯಕ್ಷಗಾನದ ಕುರಿತು ಉಲ್ಲೇಖವಿದ್ದು, ಇದನ್ನು "ಜಕ್ಕ" ಎಂದು ವರ್ಣಿಸಲಾಗಿದೆ ಮುಂದೆ ಇದು "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒಂದು ಅಭಿಪ್ರಾಯವಾಗಿದೆ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ತಳೆದು ಯಕ್ಷಗಾನವಾಯಿತು ಎಂಬುದು ಶಿವರಾಮ ಕಾರ೦ತರ "ಯಕ್ಷಗಾನ ಬಯಲಾಟ" ಎ೦ಬ ಸ೦ಶೋಧನಾ ಗ್ರಂಥದಲ್ಲಿ ನಾವು ಕಾಣಬಹುದು. ಇದು ಮೊದಲು ಬಯಲಾಟದ ರೂಪದಲ್ಲಿದ್ದು 15 ನೇ ಶತಮಾನದ ವೇಳೆಗೆ ಯಕ್ಷಗಾನದ ಸ್ವರೂಪ ಪಡೆಯಿತು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕೆಲವು ವಿದ್ವಾಂಸರ ಪ್ರಕಾರ ಯಕ್ಷಗಾನ 15 ನೇ ಶತಮಾನದಲ್ಲಿ ರೂಪುಗೊಂಡು 17 ಶತಮಾನದಲ್ಲಿ ಬೆಳೆದು 19 ನೇ ಶತಮಾನದಲ್ಲಿ ಪರಿಪೂರ್ಣತೆಯನ್ನು ಹೊಂದಿತು ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ಕೆಳದಿ ಸಂಸ್ಥಾನ ಮತ್ತು ಮೈಸೂರು ಅರಸರು ಮತ್ತು ತಂಜಾವೂರಿನ ಅರಸರ ಕಾಲದಲ್ಲಿ ಈ ಕಲೆ ಹೆಚ್ಚು ಪೋಷಿಸಲ್ಪಟ್ಟಿತು ಎಂಬುದಾಗಿಯು ಇತಿಹಾಸದ ಪುಟಗಳಿಂದ ನಮಗೆ ತಿಳಿದು ಬರುತ್ತದೆ. ಇದೊಂದು ಶಾಸ್ತ್ರೀಯ ಸಂಗೀತ ಮತ್ತು ದೇಸಿ ಸಂಗೀತದ ಒಂದು ಪ್ರಕಾರವೆಂದು ಹೇಳಬಹುದೇ ವಿನಃ ಅದನ್ನು ಜಾನಪದ ಅಂತಾ ಹೇಳಲು ಸಾಧ್ಯವಾಗುವುದಿಲ್ಲ. ಈ ಕಲೆಯ ಬಂಗಾಲದ ಯಾತ್ರಾ, ಅಸ್ಸಾಮದ ಆಂಖಯಾ, ತಮಿಳಿನ ತೆರುಕ್ಕೂತ್ತು. ಇವು ನಮ್ಮ ಯಕ್ಷಗಾನವನ್ನೇ ಹೋಲುತ್ತವೆ ಎನ್ನಬಹುದು. 
 
 
ಯಕ್ಷಗಾನದ ಅಂಶಗಳು
 
ಮನರಂಜನೆಯ ಮೂಲವಾಗಿ ಮೊದಲು ರೂಪುಗೊಂಡ ಯಕ್ಷಗಾನ ಬೆಳೆದು ಇಂದು ಸಂಸ್ಕೃತಿಯ ಒಂದು ಭಾಗವಾಗಿ ರೂಪುಗೊಂಡಿರುವುದು ಇತಿಹಾಸವೇ ಸರಿ. ಮೊದಲು ಬಯಲಾಟಗಳ ಮೂಲಕ ಪ್ರಾರಂಭವಾಗಿ ನಂತರ ಶಾಸ್ತ್ರೀಯ ರೀತಿಯ ಕಲಿಕೆಯೊಂದಿಗೆ ಯಕ್ಷಗಾನ ರೂಪಾಂತರವಾಯಿತು ಎಂದು ಹೇಳಲಾಗುತ್ತದೆ. ಇದರಲ್ಲಿ ಮುಖ್ಯವಾಗಿರುವುದು ಎಂದರೆ ಪ್ರಸಂಗಗಳು, ವೇಷಭೂಷಣ, ಭಾಗವತಿಕೆ, ಮಾತುಗಾರಿಕೆ, ಕುಣಿತ ಮತ್ತು ಹಿಮ್ಮೇಳ ಇವೆಲ್ಲವೂ ಯಕ್ಷಗಾನದ ಜೀವಾಳ ಎಂದೇ ಹೇಳಬಹುದು. ಅದಲ್ಲದೇ ಯಕ್ಷಗಾನದಲ್ಲಿರುವ ಹಾಸ್ಯ ಪಾತ್ರಗಳು ಮತ್ತು ಸ್ತ್ರೀ ಪಾತ್ರಗಳು ಈ ಕಲೆಯ ಪ್ರಮುಖ ಆಕರ್ಷಣೆ ಎನ್ನಬಹುದು.
 
ಯಕ್ಷಗಾನದ ಪ್ರಕಾರಗಳು
 
ಯಕ್ಷಗಾನದಲ್ಲಿ ಮುಖ್ಯವಾಗಿ 2 ರೀತಿಯ ಪ್ರಕಾರಗಳಿದ್ದು ಅದನ್ನು ಮೂಡಲಪಾಯ ಮತ್ತು ಪಡುವಲಪಾಯ ಎಂಬುದಾಗಿ ವಿಂಗಡಿಸಲಾಗಿದೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯವಾಯವಾಗಿದ್ದು, ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ ರೀತಿಯದಾಗಿದೆ. ಇದರಲ್ಲೂ ಸಹ ಎರಡು ವಿಧಗಳಿದ್ದು ಅದನ್ನು ತೆಂಕುತಿಟ್ಟು, ಬಡಗುತಿಟ್ಟು ಎಂದು ಕರೆಯಲಾಗುತ್ತದೆ.
 
ತೆಂಕುತಿಟ್ಟು
webdunia
ತೆಂಕುತಿಟ್ಟು ಶೈಲಿ ಯಕ್ಷಗಾನವನ್ನು ನಾವು ಉಡುಪಿಯಂದ ದಕ್ಷಿಣಕ್ಕೆ ಅಂದರೆ ಮೂಡಬಿದ್ರಿ, ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯಕಾಸರಗೋಡು ಈ ಮುಂತಾದ ಪ್ರದೇಶದಲ್ಲಿ ಇದು ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಇದರಲ್ಲಿ ಮುಖ್ಯವಾಗಿ ಹಿಮ್ಮೇಳದ ಕುರಿತು ಹೇಳುವುದಾದರೆ ಭಾಗವತರು ಇಲ್ಲಿ ಜಾಗಟೆಯನ್ನು ಬಳಸುತ್ತಾರೆ ಮತ್ತು ಚಂಡೆಯು ಭಾಗವತನ ಎಡಭಾಗದಲ್ಲಿ ನಿಂತು ಬಾರಿಸುವುದು ತೆಂಕುತಿಟ್ಟಿನ ವಿಶೇಷವಾಗಿದೆ. ತೆಂಕುತಿಟ್ಟು ಯಕ್ಷಗಾನದಲ್ಲಿ ಪಾತ್ರಧಾರಿಗಳ ವೇಷಭೂಷಣ ಮುಖವರ್ಣಿಕೆಗಳು ಸ್ವಲ್ಪ ಭೀಕರತೆಯಿಂದ ಕಂಡುಬರುತ್ತದೆ. ಅಲ್ಲದೇ ಇದರಲ್ಲಿ ಪಾತ್ರಧಾರಿಗಳು ಹೆಚ್ಚಾಗಿ ಕೀರಿಟವನ್ನು ಬಳಸುತ್ತಾರೆ. ಇದು ನೋಡಲು ಕೇರಳದ ಕತಕ್‌ಕಳಿಯನ್ನು ಹೋಲುತ್ತದೆ ಇಲ್ಲಿ ಮಾತುಗಾರಿಕೆ ಕೂಣಿತ ಎಲ್ಲವೂ ಇರುತ್ತದೆ.
 
ಬಡಗುತಿಟ್ಟು
webdunia
ಬಡಗುತಿಟ್ಟು ಯಕ್ಷಗಾನವು ಉಡುಪಿಯಿಂದ ಉತ್ತರಕ್ಕೆ ಅಂದರೆ ಉತ್ತರ ಕನ್ನಡ, ಶಿವಮೊಗ್ಗ, ಕುಂದಾಪುರ ಉಡುಪಿಯ ಕೆಲಭಾಗಗಳಲ್ಲಿ ಇದು ಕಂಡುಬರುತ್ತದೆ. ಬಡಗುತ್ತಿಟ್ಟಿನಲ್ಲಿ ನೃತ್ಯ ಮತ್ತು ಆಂಗೀಕ ಅಭಿನಯ ಪ್ರಧಾನವಾಗಿದ್ದು ಇದರಲ್ಲೂ ಸಹ ನಾವು ಚಂಡೆ ಮದ್ದಲೆಗಳನ್ನು ಕಾಣಬಹುದು. ಇಲ್ಲಿ ಚಂಡೆವಾದಕರು ಕುಳಿತು ಚಂಡೆಯನ್ನು ಬಾರಿಸುತ್ತಾರೆ. ಅಲ್ಲದೇ ಬಡಗುತ್ತಿಟ್ಟಿನಲ್ಲಿ ಹೆಚ್ಚಾಗಿ ವೇಷಭೂಷಣ ಮತ್ತು ಮುಖವರ್ಣಿಕಗಳು ತೆಂಕುತಿಟ್ಟಿನ ರೀತಿಗಿಂತ ತುಂಬಾ ವಿಭಿನ್ನವಾಗಿರುತ್ತದೆ. ಇಲ್ಲಿ ಹೆಚ್ಚಾಗಿ ಪಗಡೆ ಮುಂಡಾಸುಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಕುಣಿತವು ಸ್ವಲ್ಪ ಭರತನಾಟ್ಯದ ಕುಣಿತವನ್ನು ಹೋಲುತ್ತದೆ.
 
ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಮೂಲ ಒಂದೇ ಆಗಿದ್ದರೂ ಅಲ್ಲಿ ಬಳಕೆಯಾಗುವ ವೇಷಭೂಷಣ, ಮೂಖವರ್ಣಿಕೆಯ ಹಿಮ್ಮೇಳದ ಆಧಾರದ ಮೇಲೆ ಅದನ್ನು ವಿಂಗಡಿಸಲಾಗಿದೆ. ಅಲ್ಲದೇ ಕರಾವಳಿ ಭಾಗದ ಬಯಲಾಟಗಳು ಸಹ ಇದೇ ಮಾದರಿಯನ್ನು ಹೊಂದಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಯಕ್ಷಗಾನವನ್ನು ಬಯಲಾಟ ಅಂತಲೂ ಕರೆಯುವುದನ್ನು ನಾವು ಕಾಣಬಹುದಾಗಿದೆ.
 
 
ತಾಳ ಮದ್ದಲೆ
webdunia
ಇದು ಸಹ ಕರಾವಳಿ ಭಾಗದಲ್ಲಿ ಕಂಡುಬರುವ ಯಕ್ಷಗಾನದ ಇನ್ನೊಂದು ಪ್ರಕಾರವಾಗಿದ್ದು ಇಲ್ಲಿ ಕುಣಿತಗಳು ವೇಷಭೂಷಣ ಹಾಕಿಕೊಂಡಿರುವ ಪಾತ್ರಧಾರಿಗಳು ಕಂಡುಬರುವುದಿಲ್ಲ. ಇಲ್ಲಿ ಹಿಮ್ಮೇಳ ಮತ್ತು ಭಾಗವತಿಕೆ ಹಾಗೂ ಮಾತುಗಾರಿಕೆ ಇವಷ್ಟೇ ಇಲ್ಲಿ ಪ್ರಧಾನವಾಗಿರುತ್ತದೆ. ಇಲ್ಲಿ ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹಾಡುತ್ತಾ ಹೋದಂತೆ ಅದರ ಅರ್ಥವನ್ನು ಅಲ್ಲಿ ಕುಳಿತಿರುವ ಇನ್ನೊಬ್ಬರೂ ಹಾಡಿನ ಅರ್ಥವನ್ನು ತಮ್ಮ ಮಾತುಗಾರಿಕೆಯ ಮೂಲಕ ತಿಳಿಸುತ್ತಾ ಹೋಗುತ್ತಾರೆ. ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಇಲ್ಲಿ ಮಾತುಗಾರಿಕೆಯ ಮೂಲಕ ಚರ್ಚಿಸಲಾಗುತ್ತದೆ. ಬಯಲಾಟಕ್ಕೂ ಮತ್ತು ತಾಳ ಮದ್ದಲೆಗೂ ಇರುವ ಪ್ರಮುಖ ವ್ಯತ್ಯಾಸವಿರುವುದು ಮಾತುಗಾರಿಕೆಯಲ್ಲಿ ಎಂಬುದು ವಿಶೇಷ.
 
ಯಕ್ಷಗಾನದ ಮೂಲವಾದ ಸಹ್ಯಾದ್ರಿ ತಪ್ಪಲಿನ ಕರಾವಳಿ ಪ್ರದೇಶ ಮತ್ತು ಮಲೆನಾಡು ಪ್ರದೇಶವು ತನ್ನದೇ ಆದ ಭಾಷೆ ಆಚಾರ ಕಲೆ ಸಂಸ್ಕೃತಿಯನ್ನು ಹೊಂದಿದ್ದು ಅದನ್ನು ಸಾಂಪ್ರದಾಯಿಕ ರೀತಿಯಲ್ಲಿ ಪಾಲಿಸುತ್ತಾ ಇಂದಿಗೂ ತನ್ನತನದ ಸೊಗಡನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿನ ಆಚಾರ ಪದ್ಧತಿಗಳು ಇತರ ಪ್ರದೇಶದ ರೀತಿ ನೀತಿಗಳಿಗೆ ಹೋಲಿಸಿದರೆ ಕೊಂಚ ವಿಭಿನ್ನ ಎಂದೇ ಹೇಳಬಹುದು. ಅದರಲ್ಲೂ ಸಾಹಿತ್ಯ ಮತ್ತು ಕಲೆಗೆ ತನ್ನದೇ ಆದ ಕೊಡುಗೆ ನೀಡಿ ಅದನ್ನು ಇಂದಿನ ಡಿಜಿಟಲ್ ಯುಗದ ನಡುವೆ ಸಹ ಕಾಪಾಡಿಕೊಂಡು ಬಂದಿದೆ ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಈ ಪ್ರದೇಶವು ತನ್ನದೇ ಆದ ಪಾರಂಪರೆಯನ್ನು ಹೊಂದಿದ್ದು ಪುರಾತನ ಕಾಲದಿಂದಲೂ ಇಲ್ಲಿನ ಆಚಾರ ಪದ್ಧತಿಗಳನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ. ಈ ಪ್ರದೇಶದಲ್ಲಿರುವ ಜಾನಪದ, ಬುಡಕಟ್ಟು ಸಂಸ್ಕೃತಿ, ಯಕ್ಷಗಾನ, ಕಂಬಳ ಇಂತಹವನ್ನೆಲ್ಲಾ ಇಂದಿಗೂ ಬೆಳೆಸಿಕೊಂಡು ಅದು ಇಂದಿಗೂ ಜೀವಂತವಾಗಿರುವುದಕ್ಕೆ ಅಲ್ಲಿನ ಪರಂಪರೆಯೇ ಮುಖ್ಯ ಕಾರಣ ಎನ್ನಬಹುದು.
 
ಮೊದಲು ಹಳ್ಳಿಗಳಲ್ಲಿ ನೆಡೆಯುತ್ತಿದ್ದ ಯಕ್ಷಗಾನ ಕಲೆ ಇಂದು ಒಂದು ಉದ್ಯಮವಾಗಿ ಸಹ ಮಾರ್ಪಟ್ಟಿದೆ, ಇಂದು ಹಲವಾರು ಯಕ್ಷಗಾನ ಮೇಳಗಳಿದ್ದು ಆಯಾ ಊರುಗಳಲ್ಲಿ ಯಕ್ಷಕಲೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿವೆ. ಕರಾವಳಿ ಭಾಗದ ಮೂಲ ಕಲೆಯಾಗಿರುವ ಈ ಯಕ್ಷಗಾನ ಮುಂದಿನ ದಿನಗಳಲ್ಲಿ ವಿಶ್ವದೆಲ್ಲಡೆ ಪಸರಿಸಲಿ ಎಂಬುದೇ ಯಕ್ಷಾಭಿಮಾನಿಗಳ ಆಸೆಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಹತ್ತಿರವಿರುವ ಪಿಕ್‌ನಿಕ್ ತಾಣಗಳು...!