ಬೆಂಗಳೂರು: ರಾಜ್ಯದಲ್ಲಿ ಈಗ ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ನಾಯಕರೊಳಗೇ ಕಚ್ಚಾಟವಾಗುತ್ತಿದೆ. ಇದೀಗ ಜಾತಿಗಣತಿ ವಿರೋಧಿಸುತ್ತಿರುವ ನಾಯಕರಿಗೆ ಸಚಿವ ಜಮೀರ್ ಅಹ್ಮದ್ ಟಾಂಗ್ ನೀಡಿದ್ದಾರೆ.
ಜಾತಿ ಗಣತಿ ಬಗ್ಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿ, ಸಿಎಂ ಎಚ್ಚರಿಕೆಯ ಹೆಜ್ಜೆಯಿಡಬೇಕು ಎಂದಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಬಿಕೆ ಹರಿಪ್ರಸಾದ್, ಡಿಕೆ ಸುರೇಶ್ ಯಾರಿಗೆ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೋ ಗೊತ್ತಿಲ್ಲ. ಆದರೆ ಜಾತಿಗಣತಿ ಎನ್ನುವುದು ನಿನ್ನೆ ಮೊನ್ನೆಯ ತೀರ್ಮಾನವಲ್ಲ. ಸರ್ಕಾರವೇ ಬಿದ್ದರೂ ಸರಿಯೇ ಜಾತಿಗಣತಿ ಮಾಡಿಯೇ ಸಿದ್ಧ ಎಂದಿದ್ದರು.
ಇದರ ನಡುವೆ ಸಚಿವ ಜಮೀರ್ ಅಹ್ಮದ್ ಖಡಕ್ ಉತ್ತರ ನೀಡಿದ್ದಾರೆ. ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಜಾತಿ ಗಣತಿ ಆಗಬೇಕು ಎಂದು ಅವರು ಹೇಳಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ಮೇಲೆ ಮುಗೀತು. ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು ಎಂದಿದ್ದಾರೆ.
ಜಾತಿಗಣತಿ ಆಗಬೇಕೆನ್ನುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇತ್ತು. ಇದನ್ನು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದರು. ಅದರಂತೆ ಕಾಂಗ್ರೆಸ್ ನಡೆದುಕೊಳ್ಳಲಿದೆ. ಇದನ್ನು ಯಾರು ವಿರೋಧಿಸುತ್ತಾರೋ ಬಿಡ್ತಾರೋ, ಒಟ್ಟಿನಲ್ಲಿ ಅವರು ಏನು ಹೇಳಿದ್ದಾರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.