ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಯುವ ಮೋರ್ಚಾ ಮುಖಂಡರು ಚಿಕ್ಕಮಗಳೂರಿನಲ್ಲಿ ಮೋರ್ಚಾದ ಅಧ್ಯಕ್ಷರೂ ಸೇರಿದಂತೆ ಅನೇಕರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಮನವೊಲಿಸುವ ನಿಟ್ಟಿನಲ್ಲಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಇದ್ದಿದ್ದರೆ ಕಲ್ಲು ಎಸೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ ಹೇಳಿಕೆ ವೈರಲ್ ಆಗಿತ್ತು. ಈ ಮಾತುಕತೆಯ ವಿಡಿಯೋ ವೈರಲ್ ಆಗುವ ಮೂಲಕ ತೇಜಸ್ವಿ ಸೂರ್ಯ ಅವರನ್ನು ಮುಜುಗರಕ್ಕೀಡು ಮಾಡಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸ್ಥಾನದಿಂದ ಸಂದೀಪ್ ಹರವಿನಗಂಡಿ ಅವರನ್ನು ಬದಲಾಯಿಸಿದೆ. ಅಲ್ಲದೆ ಅಧ್ಯಕ್ಷರನ್ನಾಗಿ ಸಂತೋಷ್ ಕೋಟ್ಯಾನ್ ಅವರನ್ನು ನೇಮಕ ಮಾಡಿದೆ.