ಹುಚ್ಚು ನಾಯಿ ಕಡಿದು ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ದೇವರ ನಾಡು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ. ಕಳೆದ ತಿಂಗಳು ನೆರೆ ಮನೆಯವರ ನಾಯಿಯೊಂದು 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಕಡಿದಿತ್ತು . ಇದಾದ ಬಳಿಕ ವಿದ್ಯಾರ್ಥಿನಿ ಇದಕ್ಕೆ ಲಸಿಕೆ ತೆಗೆದುಕೊಂಡಿದ್ದಳು.
ಆಕೆಗೆ ರೇಬಿಸ್ ಶುರುವಾಗಿದ್ದು, ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (MCH) ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿನ್ನೆ(ಜೂ.30) ಗುರುವಾರ ಸಾವನ್ನಪ್ಪಿದ್ದಾಳೆ.
ಪಾಲಕ್ಕಾಡ್‌ನ (Palakkad) ಮಂಕರದಲ್ಲಿರುವ (Mankara) ಪಡಿಂಜಕರ (Padinjakara) ಮನೆಯ ಶ್ರೀಲಕ್ಷ್ಮಿ (Sreelakshmi) ಸಾವಿಗೀಡಾದ ತರುಣಿ, ಮೇ 30 ರಂದು ಈಕೆ ಕೊಯಮತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ ಈಕೆಗೆ ನೆರೆಮನೆಯವರ ನಾಯಿ ಕಡಿದಿತ್ತು. ಘಟನೆಯ ನಂತರ ವೈದ್ಯರು ಸೂಚಿಸಿದ ಆಯಂಟಿ ರೇಬಿಸ್ ಲಸಿಕೆಗಳನ್ನು ಆಕೆ ತೆಗೆದುಕೊಂಡಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ಎರಡು ದಿನಗಳ ಹಿಂದೆ ರೇಬಿಸ್‌ನ ಲಕ್ಷಣಗಳಲ್ಲಿ ಒಂದಾದ ತೀವ್ರ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಾಳೆ.