ತುಮಕೂರು ಜಿಲ್ಲೆಯ ಬೈರಗೊಂಡ್ಲು ಜಲಾಶಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಸಮಸ್ಯೆಗಳು ಸೃಷ್ಟಿಯಾಗಿದ್ದು, ಇದರಿಂದಾಗಿ ರಾಜ್ಯ ಸರ್ಕಾರ ಜಲಾಶಯದ ಸಾಮರ್ಥ್ಯವನ್ನು 10 ಟಿಎಂಸಿಯಿಂದ 2 ಟಿಎಂಸಿಗೆ ತಗ್ಗಿಸಲು ನಿರ್ಧರಿಸಿದೆ.ಬೈರಗೊಂಡ್ಲು ಜಲಾಶಯ ಎತ್ತಿನಹೊಳೆ ಯೋಜನೆಯ ಭಾಗವಾಗಿದೆ.
ಇದರಿಂದ ಯೋಜನೆಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ, ಈ ಹಿಂದೆ ಯೋಜಿಸಿದಂತೆ ಎಲ್ಲಾ ಪ್ರದೇಶಗಳಿಗೆ ನೀರುಣಿಸಲು ಜಲಾಶಯದ ನೀರು ಬಳಕೆ ಮಾಡಬಹುದು ಎಂದರು.
ನಿನ್ನೆ ವಿಧಾನ ಪರಿಷತ್ ಕಲಾಪ ವೇಳೆ ವಿರೋಧ ಪಕ್ಷದ ನಾಯಕರು ಬೈರಗೊಂಡ್ಲು ಜಲಾಶಯದ ಸಾಮರ್ಥ್ಯವನ್ನು ತಗ್ಗಿಸಿದರೆ ಕೋಲಾರ ಜಿಲ್ಲೆಯಲ್ಲಿ ಹಲವು ಪ್ರದೇಶಗಳಿಗೆ ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಚುನಾವಣಾ ಪ್ರತಿನಿಧಿಗಳು ಯೋಜನೆಯನ್ನು ವಿಳಂಬ ಮಾಡದೆ ಪ್ರಾರಂಭ ಮಾಡಬೇಕೆಂದು ಹೇಳುತ್ತಿದ್ದಾರೆ. ಅಲ್ಲದೆ 2 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ಪರಿಷ್ಕೃತ ಅಂದಾಜು ವೆಚ್ಚ 23,251 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಬದಲಿ ಪ್ರಸ್ತಾವನೆ ತಯಾರು ಮಾಡಿದ್ದಾರೆ. ಹಣಕಾಸು ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ವಿವರಿಸಿದರು.
ಜಲಾಶಯ ನಿರ್ಮಾಣಕ್ಕೆ ಇರುವ ಸವಾಲುಗಳನ್ನು ಕೂಡ ವಿವರಿಸಿದ ಅವರು, ಜಲಾಶಯ ನಿರ್ಮಾಣಕ್ಕೆ 12,857 ಎಕರೆ ಭೂಮಿ ಬೇಕಾಗಿದ್ದು ಅವುಗಳಲ್ಲಿ 11,747 ಎಕರೆ ರೈತರಿಂದ, 118 ಎಕರೆ ಅರಣ್ಯ ಭೂಮಿ ಮತ್ತು 992 ಎಕರೆ ಸರ್ಕಾರಿ ಭೂಮಿ ಬೇಕಾಗಿದೆ. ರೈತರಿಂದ ಪಡೆಯಬೇಕಾದ ಜಮೀನುಗಳು ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಇವೆ. ಈ ಎರಡೂ ಗ್ರಾಮಗಳಲ್ಲಿ ಜಮೀನುಗಳ ಸರ್ಕಾರ ನಿಗದಿಪಡಿಸಿದ ಬೆಲೆ ಭಿನ್ನವಾಗಿವೆ ಎಂದರು.