ಬೆಂಗಳೂರು: ವಿಧಾನ ಸೌಧದ ಆವರಣದಲ್ಲಿ ಅನುಮಾನಾಸ್ಪದವಾಗಿ ಸಾಗಣಿಕೆಯಾಗುತ್ತಿದ್ದ 2.5 ಕೋಟಿ ರು. ಕುರಿತು ಯಡಿಯೂರಪ್ಪರಿಗೆ ಸಂಪೂರ್ಣ ಮಾಹಿತಿಯಿದೆ ಎನ್ನುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಹೇಳೀಕೆ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಕಂಡು ಬರುತ್ತಿವೆ.
ಕಳೆದ ಶುಕ್ರವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ವಕೀಲ ಸಿದ್ದಾರ್ಥ ಎಂಬಾತರು ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಣ ಸಾಗಿಸುತ್ತಿದ್ದರು. ಪೊಲೀಸರು ಅವರನ್ನು ತಡೆದು ಪರಿಶೀಲನೆಗೆ ಒಳಪಡಿಸಿದಾಗ, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಎನ್ನುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೇ ವೇಳೆ ಕುಮಾರಸ್ವಾಮಿ, 'ವಿಧಾನಸೌಧದ ಆವರಣದಲ್ಲಿ ದೊರೆತಿರುವ ಹಣದ ಬಗ್ಗೆ ಯಡಿಯೂರಪ್ಪನವರಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ನನಗೆ ಗೊತ್ತು. ಈ ಹಣ ಯಾರಿಂದ ಯಾರಿಗೆ ಹೋಗುತ್ತಿತ್ತು ಎಂಬ ಎಲ್ಲ ಮಾಹಿತಿಗಳು ಯಡಿಯೂರಪ್ಪನವರನ್ನು ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ ಎಲ್ಲವೂ ಬಹಿರಂಗವಾಗುತ್ತದೆ' ಎಂದು ಹೇಳುವ ಮೂಲಕ ಕುಮಾರಸ್ವಾಮಿ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ.
ಮೇಲ್ನೋಟಕ್ಕೆ ಇದು ಜೆಡಿಎಸ್ ಮತ್ತು ಬಿಜೆಪಿಯ ರಾಜಕೀಯದ ಕೆಸರೆರಚಾಟ ಎಂದೆನಿಸಿದರೂ, ಸೂಕ್ಷ್ಮವಾಗಿ ಅವಲೋಕಿಸಿದರೆ ಯಾವುದೂ ಅಲ್ಲಗಳೆಯುವಂತಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅನುಭವಿ ರಾಜಕಾರಣಿ ಕುಮಾರಸ್ವಾಮಿ ಮತ್ತೊಂದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಅನುಭವಿ ರಾಜಕಾರಣಿ ಯಡಿಯೂರಪ್ಪರ ವಿರುದ್ಧ ಇಷ್ಟೊಂದು ಸಲೀಸಾಗಿ ಆರೋಪ ಮಾಡುತ್ತಾರೆ ಎಂದರೆ ಅದಕ್ಕೇನಾದರೂ ಸತ್ಯದ ಲೇಪವಿರಬಹುದೇ ಎನ್ನುವುದು ಸದ್ಯದ ಪ್ರಶ್ನೆ.
ಯಡಿಯೂರಪ್ಪರ ವಿರುದ್ಧ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಬೆಂಬಲಿಗರು ಆರೋಪಿಸುತ್ತಿದ್ದಾರೆಯೇ ಹೊರತು, ಬಿಜೆಪಿಯ ಇನ್ನಿತರ ಮುಖಂಡರು ಆ ಕುರಿತು ಯಾವೊಂದು ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. ಸ್ವತಃ ಯಡಿಯೂರಪ್ಪರೇ ಯಾವ ಮಾತನ್ನೂ ಆಡದೆ ಮೌನಕ್ಕೆ ಶರಣಾಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಇದು ಕುಮಾರಸ್ವಾಮಿಯ ಹೇಳಿಕೆಗೆ ಪರೋಕ್ಷವಾಗಿ ಇಂಬು ನೀಡುವಂತಿದ್ದರೂ ಯಾವುದೂ ಸತ್ಯವಲ್ಲ ಎನ್ನುವುದು ಗಮನಿಸಬೇಕು.
ಇವುಗಳ ನಡುವೆಯೇ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ, ಟೆಂಡರ್ ಸಂಬಂಧ ಸಚಿವರೊಬ್ಬರಿಗೆ ನೀಡಲು ಹಣ ತರಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಆ ಹಣ ಯಾರ ಮೂಲಕ, ಯಾವ ಸಚಿವರಿಗೆ ತಲುಪುವುದಾಗಿತ್ತು? ಎನ್ನುವುದು ಬಹಿರಂಗವಾಗಬೇಕಿದೆ. ರಾಜಕೀಯದಲ್ಲಿ ಯಾರು ಬೇಕಾದರ ಮಿತ್ರರಾಗಬಹುದು, ಯಾರು ಬೇಕಾದರೂ ಶತ್ರುಗಳಾಗಬಹುದು. ಶತ್ರುಗಳು ಸದಾ ತಮ್ಮ ಶತ್ರುಗಳ ವಿರುದ್ಧ ಕತ್ತಿಯನ್ನು ಮಸೆಯುತ್ತಲೂ ಇರಬಹುದು. ಸಿಕ್ಕ ಸಿಕ್ಕ ಪ್ರಕರಣವನ್ನು ಶತ್ರುಗಳ ತಲೆಗೆ ಕಟ್ಟಲೂ ಪ್ರಯತ್ನಿಸಬಹುದು. ರಾಜಕೀಯದ ಚದುರಂಗದಾಟದಲ್ಲಿ ಗೆಲುವೊಂದೇ ಅಂತಿಮ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರ ಆರೋಪ ಮಿಥ್ಯವೋ ಸತ್ಯವೋ... ರಾಜ್ಯ ರಾಜಕೀಯದಲ್ಲಂತೂ ಗಂಭಿರ ಚರ್ಚೆಗೆ ಇಂಬು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.