ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕ್ಯಾಬ್ ಚಾಲಕ ಮತ್ತು ಓರ್ವ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 22 ರಂದು ಮಧ್ಯ ರಾತ್ರಿ ಮಹಿಳಾ ಉದ್ಯೋಗಿ, ಅಲ್ವಾಲ್ ಪ್ರದೇಶದಲ್ಲಿರುವ ಮನೆಗೆ ತೆರಳಲು ಕಂಪೆನಿಯ ಕಾರು ಹತ್ತಿದ್ದಾಳೆ. ಕಾರಿನಲ್ಲಿ ಒಬ್ಬಳೆ ಇರುವುದು ಕಂಡ ಕಂಪೆನಿಯ ಭದ್ರತಾ ಸಿಬ್ಬಂದಿಯೊಬ್ಬ ತಾನು ಡ್ರಾಪ್ ನೀಡುವುದಾಗಿ ಹೇಳಿ ಕಾರು ಏರಿದ್ದಾನೆ.
ಭದ್ರತಾ ಸಿಬ್ಬಂದಿ ಕಾರಿನ ಮುಂದಿನ ಸೀಟಿನಲ್ಲಿ ಕೂರುವುದು ಬಿಟ್ಟು ಯುವತಿ ಕುಳಿತಿದ್ದ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದಾನೆ. ಕಾರು ಸಾಗುತ್ತಿದ್ದಂತೆ, ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಯುವತಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಗೋಗೆರೆದರೂ ಯಾವುದೇ ಪ್ರಯೋಜನವಾಗಿಲ್ಲ.
ನಂತರ ಯುವತಿ ಜೋರಾಗಿ ಕೂಗಿಕೊಂಡಾಗ ಗಾಬರಿಗೊಂಡು ಚಾಲಕ ಯುವತಿಯ ಮನೆಯ ಬಳಿ ಕಾರು ನಿಲ್ಲಿಸಿದ್ದಾನೆ.
ಮಾರನೇ ದಿನ ಯುವತಿ ಅಲ್ವಾಲ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾಳೆ. ಯುವತಿಯ ದೂರಿನ ಮೇರೆಗೆ ಕಾರು ಚಾಲಕ ಮತ್ತು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ