ಕುಡಿಯುವ ನೀರಿಗಾಗಿ ಆಗ್ರಹಿಸಿ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರ ಗ್ರಾಮದಲ್ಲಿ ಕುಡಿಯುವ ನೀರು ಬೇಕೆಂದು ಪ್ರತಿಭಟನೆ ನಡೆದಿದೆ. ಒಂದು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರತಿಭಟನಾಕಾರರು, ನೀರು ಬಿಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಅಂತಾ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎರಡು ಗಂಟೆಗಳ ಕಾಲ ಸುಡು ಬಿಸಿಲನ್ನೂ ಲೆಕ್ಕಿಸದ ಮಹಿಳಾ ಪ್ರತಿಭಟನೆಕಾರರು ಗದಗ ಹಾಗೂ ಮುಂಡರಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಯಾವ ವಾಹನಗಳಿಗೂ ಪ್ರವೇಶ ನೀಡದೇ ಅಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವದಿಲ್ಲ ಅಂತ ಪಟ್ಟು ಹಿಡಿದರು.
ಇದರಿಂದ ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು. ನಂತರ ಸಂಬಂಧಪಟ್ಟ ಅಧಿಕಾರಿಗಳ ಸಮೇತ ಸ್ಥಳಕ್ಕೆ ದೌಡಾಯಿಸಿದ ಮುಂಡರಗಿ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ, ಪ್ರತಿಭಟನಾಕಾರರ ಮನವೊಲಿಸಿದರು. ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಹರಿಸುವ ವವಸ್ಥೆ ಮಾಡಿಸುತ್ತೇನೆ ಅಂತಾ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು. ಮುಂಡರಗಿ ಸಿಪಿಐ ಶ್ರೀನಿವಾಸ ಮೇಟಿ ಬಂದೋಬಸ್ತ ನೀಡಿದ್ದರು.