ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ನೂರಾರು ಮಹಿಳೆಯರು ತೀವ್ರವಾಗಿ ಖಂಡಿಸಿ, ಜಿಲ್ಲಾಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.
ಬೆಳಗಾವಿಯ ಕಡೋಲಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಇದಕ್ಕೂ ಮೊದಲು ಎಪಿಎಂಸಿ ಪೊಲೀಸ್ ಠಾಣೆ ತಲುಪಿದ ಗ್ರಾಮಸ್ಥರು, ಆರೋಪಿಯ ತಂದೆಯ ವಿರುದ್ಧ ಬಾಲಕಿಯ ಅಪಹರಣದ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು. ಆರೋಪಿಯ ತಂದೆಯು ಪ್ರಕರಣವನ್ನು ಮುಚ್ಚಿ ಹಾಕಲು ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕಿಯನ್ನು ಸಂಜೆ ಆಸ್ಪತ್ರೆಯಿಂದಲೇ ಎತ್ತಿಕೊಂಡು ಹೋಗಿದ್ದನು. ದೂರು ದಾಖಲಾದ ಬಳಿಕ ತಡರಾತ್ರಿ ಪಾಲಕರಿಗೆ ಒಪ್ಪಿಸಿದ್ದರು.
ಇದನ್ನು ಅಪಹರಣದ ಪ್ರಕರಣವೆಂದು ಪರಿಗಣಿಸಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಗ್ರಾಮಸ್ಥರು.
ಆಸ್ಪತ್ರೆಯ ಅಧಿಕಾರಿಗಳು ಬಂದು, ಆರೋಪಿಯ ತಂದೆಯ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ತಲುಪಿರುವ ಗ್ರಾಮಸ್ಥರು, ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಬೇಕು, ನಿರ್ಭಯಾ ಪ್ರಕರಣದ ಬಳಿಕ ರಚಿಸಲಾಗಿರುವ ಮಾರ್ಗಸೂಚಿಯಂತೆ ಪೊಲೀಸರು ಮಗು ಇದ್ದಲ್ಲಿಯೇ ಬಂದು ವಿಚಾರಣೆ ನಡೆಸಬೇಕು ಮತ್ತು ‘ನಿರ್ಭಯಾ ಫಂಡ್’ ಅಡಿಯಲ್ಲಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ತಕ್ಷಣ ಪರಿಹಾರ ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ರು.