ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲಿನ ಭ್ರಷ್ಟಾಚಾರವನ್ನು ಬಿಜೆಪಿ ನಾಯಕರು ಕೋರ್ಟ್‌ನಲ್ಲಿ ಪ್ರಶ್ನಿಸಲಿ. ಒಂದು ವೇಳೆ, ಆರೋಪಗಳು ಸಾಬೀತಾದಲ್ಲಿ ಜೈಲಿಗೆ ಹೋಗಲು ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ಆಯೋಜಿಸಿದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಮಾಡಿದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದಲ್ಲಿ ನಮ್ಮ ಪಕ್ಷದ ನಾಯಕರು ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ಮಾಡಿರುವ ಆರೋಪಗಳಿಗೆ ರಾಜ್ಯದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಕಳೆದ 2013ರಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಜನತೆಯ ಆಶೋತ್ತರಗಳನ್ನು ಈಡೇರಿಸಿದ್ದರಿಂದ 2018ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಕಾನೂನು ಖಾತೆ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಬಿಜೆಪಿಯ ಪರಿವರ್ತನಾ ಯಾತ್ರೆ ಮೊದಲ ದಿನವೇ ಪಂಕ್ಚರ್ ಆಗಿದೆ. ಇದೀಗ ಬಿಜೆಪಿ ಅಂತರಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಪರಿವರ್ತನಾ ಯಾತ್ರೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಟೀಕಿಸಲು ಮಾತ್ರ ಸೀಮಿತವಾಗಿದೆ ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.