ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಅವರು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಸ್ಥಳೀಯರಿಗೆ ಅವಕಾಶ ಒದಗಿಸುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್) ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು. ಅಲ್ಲದೆ, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳು ಸಂವಿಧಾನ ಮಾನ್ಯತೆ ನೀಡಿರುವ ಎಲ್ಲ 22 ಭಾಷೆಗಳಲ್ಲಿ ನಡೆಸಬೇಕು ಹಾಗೂ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅವಕಾಶ ಒದಗಿಸುವ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದರು.
ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ 2018-19ನೇ ಸಾಲಿಗೆ ಬಾಕಿ ಇರುವ 233 ಕೋಟಿ ರೂ. ಪರ್‍ಫಾರ್ಮನ್ಸ್ ಗ್ರಾಂಟ್ಸ್ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಹಾಗೂ ಬಡ್ಡಿ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆ 1961 ರ ನಿಯಮ 10(29ಎ) ಅಡಿ ಮಂಡಳಿಯನ್ನು ಸೇರ್ಪಡೆಗೊಳಿಸಿ, ಕಾಫಿ ಮಂಡಳಿ, ರಬ್ಬರ್ ಮಂಡಳಿಗಳಂತೆ, ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.
ಇದಲ್ಲದೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯವು ಅತ್ಯುತ್ತಮ ಸಾಧನೆ ಮಾಡಿದ್ದು, ಕೇಂದ್ರದಿಂದ ಕೂಲಿ ಮುಂಗಡವೂ ಸೇರಿದಂತೆ ಸುಮಾರು ಕೋಟಿ ರೂ. ಬಿಡುಗಡೆಯಾಗಬೇಕಿದೆ. ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.
ಮುಖ್ಯಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾಕ್ಟರ್. ಇ. ವಿ. ರಮಣ ರೆಡ್ಡಿ ಉಪಸ್ಥಿತರಿದ್ದರು.