ಇತಿಹಾಸ ಪ್ರಸಿದ್ದ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರ ಪರಿಣಾಮ, ಎರಡು ವರ್ಷಗಳಿಂದ ಆಷಾಡ ಮಾಸದ ರಥೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಬ್ರಹ್ಮ ರಥವನ್ನ ಪುನರ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.
ಚಾಮರಾಜನಗರ ಪಟ್ಟಣದ ವಿವಿಧ ಸಮುದಾಯದ ಪ್ರಮುಖರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಬ್ರಹ್ಮರಥದ ನಿರ್ಮಾಣಕ್ಕಾಗಿ ಸರ್ಕಾರ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ಅನುದಾನ ನೀಡಿದ್ದರೂ, ರಥ ನಿರ್ಮಾಣದ ಕಾಮಗಾರಿ ಇನ್ನೂ ಆರಂಭಿಸದ ಜಿಲ್ಲಾಡಳಿತ ಕ್ರಮವನ್ನ ಪ್ರತಿಭಟನಾಕಾರರು ಖಂಡಿಸಿದರು.
ಶಿಥಿಲಗೊಂಡಿರುವ ಚಾಮರಾಜೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಂಡು, ಎರಡು ವರ್ಷಗಳೇ ಕಳೆದಿವೆ. ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲವೆಂದು ಆರೋಪಿಸಿದ ಧರಣಿ ನಿರತರು, ಜಿಲ್ಲಾಡಳಿತ, ಮುಜರಾಯಿ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಬ್ರಹ್ಮ ರಥವನ್ನ ನಿರ್ಮಾಣ ಮಾಡಬೇಕು. ನೆನೆಗುದಿಗೆ ಬಿದ್ದಿರುವ ಜೀರ್ಣೋದ್ಧಾರ ಕಾಮಗಾರಿಯನ್ನ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.