ಶಾಸಕಿಯೊಬ್ಬರು ಬಿಂದಾಸ್ ಆಗಿ ಕುಣಿದು ಮತ್ತೆ ಗಮನ ಸೆಳೆದಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ದಾಖಲೆಯ ಅಂತರದ ಮತಗಳೊಂದಿಗೆ ಬಿಜೆಪಿಯ ಅನಂತಕುಮಾರ ಹೆಗಡೆ ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಕುಣಿದು ಕುಪ್ಪಳಿಸಿದರು.
ಡೋಲಿನ ಶಬ್ದಕ್ಕೆ ಪಕ್ಷದ ಮಹಿಳಾ ಮುಖಂಡರು, ಕಾರ್ಯಕರ್ತರೂ ಕೂಡ ಹೆಜ್ಜೆ ಹಾಕಿದರು. ಕಾರವಾರ ನಗರದ ಗ್ರೀನ್ ಸ್ಟ್ರೀಟ್ ನಲ್ಲಿರುವ ಬಿಜೆಪಿ ಕಚೇರಿಯ ಎದುರು ಹಮ್ಮಿಕೊಂಡಿದ್ದ ಈ ಸಂಭ್ರಮಾಚರಣೆಯ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
'ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದಾಗಿ ಅನಂತಕುಮಾರ ಹೆಗಡೆಯವರು ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯೆಂದರೆ ತತ್ವ, ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿದೆ. ಇದಕ್ಕಾಗಿ ಜನರು ಬಿಜೆಪಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ' ಎಂದು ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಹೇಳಿದರು.