ಹರಿಯಾಣ: ವಿಧಾನಸಭೆ ಚುನಾವಣೆಗೆ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ ಇಳಿದಿರುವ ವಿನೇಶ್ ಫೋಗಟ್ ಅವರು ಸದ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಮತದಾರರನ್ನು ಉದ್ಧೇಶಿಸಿ ಮಾತನಾಡಿದ ಅವರು, ತನಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೋಗಲು ಸಹಾಯ ಮಾಡಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಎಂದು ಹೇಳಿಕೆ ನೀಡಿದ್ದಾರೆ.
ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಫೈನಲ್ ಪಂದ್ಯಾಟಕ್ಕೂ ಮುನ್ನಾ ನಿಗದಿತ ತೂಕಕ್ಕಿಂತ 100ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹ ಮಾಡಲಾಯಿತು. ಇದರ ಬೆನ್ನಲ್ಲೇ ಅಚ್ಚರಿಯಂತೆ ಕುಸ್ತಿ ಸ್ಪರ್ಧೆಗೆ ವಿನೇಶ್ ಫೋಗಟ್ ಅವರು ವಿದಾಯ ಘೋಷಿಸಿದರು.
ಈ ಬಗ್ಗೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ವಿನೇಶ್ ಅವರು, ಕುಸ್ತಿ ಸ್ಪರ್ಧೆಯಿಂದ ಅನರ್ಹತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದೆ. (ಪ್ರಧಾನಿಯಿಂದ) ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ. ಕರೆ ನೇರವಾಗಿ ನನಗೆ ಬಂದಿಲ್ಲ ಆದರೆ ಅಲ್ಲಿದ್ದ ಭಾರತೀಯ ಅಧಿಕಾರಿಗಳು ಅವರು (ಪಿಎಂ ಮೋದಿ) ಮಾತನಾಡಲು ಬಯಸಿದ್ದಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧನಾಗಿದ್ದೆ. ಆದಾಗ್ಯೂ, ಅವರು ಷರತ್ತುಗಳನ್ನು ಹಾಕಿದರು. ನೀವು ಪ್ರಧಾನಿಯೊಂದಿಗೆ ಮಾತನಾಡುವುದನ್ನು ರೆಕಾರ್ಡ್ ಮಾಡಲಾಗುತ್ತದೆ ಎಂದರು. ಸಂಭಾಷಣೆಯನ್ನು ಪ್ರಚಾರ ಮಾಡುವ ಷರತ್ತಿಲ್ಲದೆ ಪ್ರಧಾನ ಮೋದಿಯಿಂದ ನಿಜವಾದ ಕರೆ ಬರುತ್ತಿದ್ದರೆ ನಾನು ಪ್ರಶಂಸಿಸುತ್ತಿದ್ದೆ ಎಂದರು.
"ಅವರು ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅವರು ಅದನ್ನು ರೆಕಾರ್ಡ್ ಮಾಡದೆಯೇ ಕರೆ ಮಾಡಬಹುದಿತ್ತು ಮತ್ತು ನಾನು ಕೃತಜ್ಞರಾಗಿರುತ್ತಿದ್ದೆ" ಎಂದು ಅವರು ಹೇಳಿದರು.