ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಉತ್ತರ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿ ಸರಣಿ ಪೋಸ್ಟ್ ಮಾಡಿದ್ದಾರೆ.
ಎಕ್ಸ್ ಖಾತೆಯಲ್ಲಿ 'ಉತ್ತರ ಕೊಡಿ ಮೋದಿ' ಎಂಬ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಪೋಸ್ಟ್ ಮಾಡಿರುವ ಅವರು, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಉತ್ತರಿಸುವಂತೆ ಕೇಳಿಕೊಂಡಿದ್ದಾರೆ.
'ಸತ್ಯದ ನಾಡಾಗಿರುವ ಕರ್ನಾಟಕಕ್ಕೆ ಆಗಮಿಸಲಿರುವ ಸುಳ್ಳಿನ ಸರದಾರರಾದ ನರೇಂದ್ರ ಮೋದಿ ಅವರಿಗೆ ಸ್ವಾಗತ. ಕಾನೂನು ಪ್ರಕಾರ ಶಿಕ್ಷಾರ್ಹವಾಗಿರುವ ನಿಮ್ಮ ಸುಳ್ಳುಗಳ ಬಗ್ಗೆ ಯಾರೂ, ಯಾವುದೇ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನಮಗೂ ಗೊತ್ತಾಗಿದೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋರುತ್ತೇನೆ' ಎಂದಿದ್ದಾರೆ.
ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ
'ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ?
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ? ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ?
ನಿರ್ಮಲಾ ಸೀತಾರಾಮನ್ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ
ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ. ಸ್ಯಾಮ್ ಪಿತ್ರೋಡಾ ಅವರು ಇದನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿರುವುದು ನಿಜ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು.
ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರುಮಾಡಿರುವುದೇ ನಿಮ್ಮ ಸಹದ್ಯೋಗಿಯಾಗಿರುವ ಹಣಕಾಸು ಸಚಿವೆ @nsitharaman
. 2019ರ ಬಜೆಟ್ ನಲ್ಲಿ ಇದನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಆ ಕಾಲದ ಪತ್ರಿಕೆಗಳ ವರದಿಗಳೇ ಸಾಕ್ಷಿ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?
ನಿಮ್ಮದು ಸೂಟುಬೂಟು ಸರ್ಕಾರ
ನರೇಂದ್ರ ಮೋದಿಯವರೇ ನಿಮ್ಮದು ಸೂಟುಬೂಟು ಸರ್ಕಾರ, ಶ್ರೀಮಂತರ ಪರ ಮತ್ತು ಬಡವರ ವಿರೋಧಿ ಸರ್ಕಾರ ಎನ್ನುವ ನಮ್ಮ ಆರೋಪ ಆಧಾರರಹಿತವಾದುದೇನಲ್ಲ. 2019ರಲ್ಲಿ ನಿಮ್ಮದೇ ಸರ್ಕಾರ ಶೇಕಡಾ 30ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 22ಕ್ಕೆ ಇಳಿಸಿದೆ ಎನ್ನುವುದು ನಿಮಗೆ ತಿಳಿದಿರಲಿ. ಈ ಮೂರ್ಖತನದ ನಿರ್ಧಾರದಿಂದಾಗಿ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಕಳೆದುಕೊಂಡ ಆದಾಯ 1.81 ಲಕ್ಷ ಕೋಟಿ ರೂಪಾಯಿ. ದೇಶದ ಬಡವರ ಕಲ್ಯಾಣಕ್ಕಾಗಿ ವ್ಯಯವಾಗಬೇಕಾಗಿದ್ದ ಈ ಹಣ ಕಾರ್ಪೋರೇಟ್ ದೊರೆಗಳ ಜೇಬಿಗೆ ಸೇರಿದೆ. ಅವರ ಲಾಭದಲ್ಲಿ ಯಾರ ಪಾಲು ಎಷ್ಟು? ಇದೇನಾ ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.