ಬೆಂಗಳೂರು ನಗರದಲ್ಲಿ ಇಂದು ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಈ ವೇಳೆ ಅನಗತ್ಯ ಓಡಾಡುವುದು ಕಂಡು ಬಂದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಾರಾಂತ್ಯ ಕರ್ಫ್ಯೂ ವೇಳೆ ಸರ್ಕಾರದ ಆದೇಶವನ್ನು ಎಲ್ಲರೂ ಗೌರವಿಸಬೇಕು. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಅನಗತ್ಯ ಓಡಾಡುವುದು ಸರಿಯಲ್ಲ ಎಂದರು.
ವಾಣಿಜ್ಯ ಮಳಿಗೆ ಮಾಲೀಕರು ನಿಯಮ ಉಲ್ಲಂಘಿಸುವುದು ಕಂಡು ಬಂದರೆ ಕ್ರಮಕೈಗೊಳ್ಳುತ್ತೇವೆ. ತುರ್ತು ಪ್ರಯಾಣ ಹಾಗೂ ಅನುಮತಿ ನೀಡಲಾಗಿರುವ ಸೇವೆ ಹೊರತುಪಡಿಸಿದರೆ ಬೇರೆ ಯಾವ ವಾಹನಗಳು ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ, ವಾಹನಗಳನ್ನು ಜಪ್ತಿ ಮಾಡುತ್ತೇವೆ. ಅಲ್ಲಲ್ಲಿ ಪೊಲೀಸರು ತಪಾಸಣೆ ಮಾಡಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ವೇಳೆ ಯಾವುದೇ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಈ ಬಾರಿ ಯಾವುದೇ ಪಾಸ್ಗಳನ್ನು ನೀಡಲಾಗುವುದಿಲ್ಲ. ತಮ್ಮ ಐಡೆಂಟಿಟಿ ಕಾರ್ಡ್, ಪ್ರಯಾಣದ ಟಿಕೆಟ್ಗಳು ಸೇರಿ ಸೂಕ್ತವಾದ ದಾಖಲೆ ನೀಡಿದರೆ ಮಾತ್ರ ಓಡಾಡುವುದಕ್ಕೆ ಅನುಮತಿ ನೀಡಲಾಗುವುದು ಎಂದರು.