ನ್ಯಾಯಾಂಗದ ಆದೇಶ ಧಿಕ್ಕರಿಸುವ ಉದ್ದೇಶ ನಮಗಿಲ್ಲ. ಆದರೆ, ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾವೇರಿಗಾಗಿ ನಡೆದ ವಿಶೇಷ ವಿಧಾನ ಮಂಡಲ ಅಧಿವೇಶದಲ್ಲಿ ಭಾಷಣ ಮಾಡಿದ ಅವರು, ನೆಲ, ಜಲ ಹಾಗೂ ಭಾಷೆಯ ವಿಷಯದಲ್ಲಿ ನಾವೇಲ್ಲ ಒಗ್ಗಟ್ಟಿನಿಂದ ಹೋರಾಡುತ್ತೇವೆ. ಈ ವಿಷಯದಲ್ಲಿ ಎಂದೂ ನಾವು ರಾಜಕೀಯ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಕಾವೇರಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳೆದ 32 ವರ್ಷಗಳಿಂದ ಫಾಲಿ ನಾರಿಮನ್ ಅವರು ಸಮರ್ಥವಾಗಿ ವಾದ ಮಂಡಿಸುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಂಡ ವಿರ್ಧಾರದ ಕುರಿತು ನಾರಿಮನ್ ಅವರಿಗೆ ತಿಳಿಸಲಾಗಿದೆ. ರಾಜ್ಯದ ಹಿತಾಸಕ್ತ ನಮಗೆ ಮುಖ್ಯ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ರಾಜ್ಯದಲ್ಲಿ ಈ ವರ್ಷ ಅತೀ ಕಡಿಮೆ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದೆ. ರೈತರ ಬೆಳೆದ ಬೆಳೆ ನಾಶವಾಗುತ್ತಿದ್ದು, ನಮ್ಮ ರೈತರು ಬೆಳೆಯನ್ನು ತ್ಯಾಗ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಸದ್ಯ ಕಾವೇರಿ ಜಲಾಶಯದಲ್ಲಿ 27.6 ಟಿಎಂಸಿ ನೀರು ಮಾತ್ರ ಇದ್ದು, ಈ ನೀರು ಕೇವಲ 3 ತಿಂಗಳ ಕಾಲ ಕುಡಿಯಲು ಸಾಕಾಗುತ್ತದೆ. ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ