ಜೆಡಿಎಸ್ ಪಕ್ಷದಿಂದ ಹೊರ ಬಂದ ಮೇಲೆ ಸುಮಾರು 10 ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯನವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆ ತೆರಳಿರಲಿಲ್ಲ. ಆದರೆ, ಕಾವೇರಿ ವಿವಾದ ಈ ಗುರು ಶಿಷ್ಯರನ್ನು ಮತ್ತೆ ಹತ್ತಿರವಾಗುವಂತೆ ಮಾಡಿದೆ. ಆದರೆ, ಈ ಅಪರೂಪದ ಭೇಟಿ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂದು ಗೊತ್ತೆ?
ಕಾವೇರಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು. ಸಿದ್ದರಾಮಯ್ಯನವರು, ದೇವೇಗೌಡರ ನಿವಾಸಕ್ಕೆ ತೆರಳಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಸರ್ವಪಕ್ಷ ಸಭೆಗೆ ಕರೆದುಕೊಂಡು ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೆ ಸಲಹೆ ನೀಡಿದ್ದರು ಎಂದು ತಿಳಿದು ಬಂದಿದೆ.
ದೇವೇಗೌಡರು ರಾಜಕೀಯ ಅನುಭವ ಹೊಂದಿದವರು. ರಾಜ್ಯದಿಂದ ಮೊದಲ ಬಾರಿ ಪ್ರಧಾನಿಯಾದವರು. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆಯ ಕುರಿತು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಸಂದರ್ಭದಲ್ಲಿ ದೇವೇಗೌಡರ ಮಾರ್ಗದರ್ಶನ ಪಡೆಯುವುದು ಸೂಕ್ತ ಎಂದು ಇಂಧನ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ