ಅಮರ್ಜಾ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಕೊರಳ್ಳಿ, ಭೂಸನೂರ, ದೇವಂತಗಿ, ಧಂಗಾಪೂರ ಹಾಗೂ ಬಟ್ಟರಗಾ ಗ್ರಾಮಗಳಲ್ಲಿನ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜೂನ್ 4ರ ಬೆಳಿಗ್ಗೆ 10 ಗಂಟೆಯಿಂದ ಏಳು ದಿನಗಳವರೆಗೆ ಹಂತ ಹಂತವಾಗಿ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಕಾಲುವೆಗಳಿಗೆ ಹರಿಬಿಡಲಾಗುತ್ತದೆ.
ಹೀಗಂತ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ಐಪಿಸಿ ವಿಭಾಗ ನಂ.1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಈ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ ಅವರ ಕೋರಿಕೆ ಮೇರೆಗೆ ಪ್ರಾದೇಶಿಕ ಆಯುಕ್ತರು ಈ ನಿರ್ಧಾರ ಕೈಗೊಂಡಿದ್ದಾರೆ.
ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಅಮರ್ಜಾ ಯೋಜನೆ ಅಣೆಕಟ್ಟಿನಿಂದ ಒಟ್ಟು ಲಭ್ಯವಿದ್ದ ನೀರಿನ ಪ್ರಮಾಣದಲ್ಲಿ 50 ಎಂ.ಸಿ.ಎಫ್.ಟಿ. ನೀರನ್ನು ಪ್ರತಿದಿನ ಕಾಲುವೆಗಳಿಗೆ ಬಿಡಲಾಗುವುದು. ಇದರಲ್ಲಿ ಅಮರ್ಜಾ ಎಡದಂಡೆ ಕಾಲುವೆಯಿಂದ 45 ಕ್ಯೂಸೆಕ್ಸ್ ಹಾಗೂ ಬಲದಂಡೆ ಕಾಲುವೆಯಿಂದ 35 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.