ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(GT & TC)ದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು ಇಂದು ಚಾಲನೆ ನೀಡಿದರು.ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ(ಕಾಸಿಯಾ)ದ ಸಭಾಂಗಣದಲ್ಲಿ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಎಲ್ಲಾ ವಲಯಗಳಲ್ಲಿರುವ ಐಟಿ-ಬಿಟಿ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಗಾರ್ಮೆಂಟ್ಸ್ ಗಳ ಉದ್ಯೋಗಿಗಳು ಕಾರ್ಯನಿರ್ವಹಿಸುವ ಸ್ಥಳಕ್ಕೆ ಖುದ್ದಾಗಿ ಭೇಟಿಯಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಾಕಷ್ಟು ಮಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ತಪ್ಪದೆ ಮತದಾನ ಮಾಡುವಂತೆ ತಮ್ಮ ಸಂಸ್ಥೆಗಳ ವತಿಯಿಂದ ಅರಿವು ಮೂಡಿಸುವ ಕೆಲಸ ಮಾಡಬೇಕು. ಉದ್ಯಮಿಗಳು ತಮ್ಮ- ತಮ್ಮ ಕೈಗಾರಿಕೆಗಳಲ್ಲಿ ಮತದಾನ ಜಾಗೃತಿಯ ಬಿತ್ತಿಪತ್ರಗಳನ್ನು ಅಂಟಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಎಲ್ಲರೂ ಈ ಪ್ರಜಾಪ್ರಭುತ್ವದ ಹಬ್ಬದ ದಿನವಾದ ಮೇ. 10 ರಂದು ತಪ್ಪದೇ ಮತದಾನದ ಮಾಡುವಂತೆ ಕೋರಿದರು.ಕಾಸಿಯಾ ಅಡಿಯಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 5.6 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದು, ಮತದಾನದ ದಿನ ಎಲ್ಲರಿಗೂ ವೇತನ ಸಹಿತ ರಜೆ ನೀಡಿ ತಪ್ಪದೇ ಮತದಾನ ಮಾಡಲು ಉದ್ಯೋಗಿಗಳಿಗೆ ತಿಳಿಸಲಾಗುವುದೆಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಭರವಸೆ ನೀಡಿದರು.