Publish Date: Sat, 05 Sep 2026 (12:15 IST)
Updated Date: Sat, 05 Sep 2026 (12:18 IST)
ಬೆಂಗಳೂರು: ನಿಮಗೆ ಸಂಬಳಾನೂ ಕೊಡಬೇಕು, ಎಲ್ಲಾ ಕೊಡಬೇಕು, ಕೆಲಸ ಮಾತ್ರ ಮಾಡಲ್ಲ. ಇಡೀ ನಗರ ಗಬ್ಬೆದ್ದು ನಾರುತ್ತಾ ಇದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛತಾ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಟಿ ರೌಂಡ್ಸ್ ಮಾಡಿರುವ ಸಚಿವ ಕೃಷ್ಣ ಭೈರೇಗೌಡ ಅಲ್ಲಲ್ಲಿ ಬಿದ್ದಿದ್ದ ಕಸದ ರಾಶಿ ನೋಡಿ ಕೆಂಡಾಮಂಡಲರಾಗಿದ್ದಾರೆ. ನಗರದ ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಪರಿಶೀಲಿಸಲು ಬೆಳಗಿನ ಜಾವ 5:30ಕ್ಕೆ ದಿಢೀರ್ ತಪಾಸಣೆ ನಡೆಸಿದ ಕಂದಾಯ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಕರ್ತವ್ಯ ಲೋಪ ಎಸಗಿದ ನೈರ್ಮಲ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ವಿಭಾಗದ ಮಲ್ಲಸಂದ್ರ ಹಾಗೂ ಜಾಲಹಳ್ಳಿ ವಾರ್ಡ್‌ಗಳಲ್ಲಿನ ಕಸ ಸಂಗ್ರಹಣೆ ಮಸ್ಟರಿಂಗ್ ಪಾಯಿಂಟ್‌ಗಳಿಗೆ ಹಠಾತ್ ಭೇಟಿ ನೀಡಿದ ಸಚಿವರು, ವಾಹನಗಳ ಆಟೋ ಚಾಲಕರು ಮತ್ತು ಪೌರಕಾರ್ಮಿಕರ ಹಾಜರಾತಿಯನ್ನು ಪರಿಶೀಲಿಸಿದರು. ಈ ವೇಳೆ ಸುಮಾರು ಶೇಕಡಾ 30% ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಇರುವುದು ಕಂಡುಬಂತು.
ರಸ್ತೆಬದಿಯಲ್ಲಿ ಬಿದ್ದಿದ್ದ ಕಸದ ರಾಶಿ, ಸರಿಯಾಗಿ ನಡೆಯದ ಮನೆಮನೆಯ ಕಸ ಸಂಗ್ರಹಣೆ ಹಾಗೂ ಧೂಳುಮಯ ವಾತಾವರಣವನ್ನು ಕಂಡು ಆಕ್ರೋಶಗೊಂಡ ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ, ತಮ್ಮನ್ನು ಸೇವೆಯಲ್ಲಿ ಖಾಯಂ ಮಾಡುವಂತೆ ಪೌರಕಾರ್ಮಿಕರು ಮನವಿ ಮಾಡಿದಾಗ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು.
"ಶೇಕಡಾ 30% ರಷ್ಟು ನೈರ್ಮಲ್ಯ ಸಿಬ್ಬಂದಿಗಳು ಕೆಲಸಕ್ಕೆ ಬಂದೇ ಇಲ್ಲ. ರಸ್ತೆಗಳಲ್ಲಿ ಕಸ ಬಿದ್ದು ಕೊಳೆಯುತ್ತಿದೆ, ಇಡೀ ಪ್ರದೇಶ ಧೂಳುಮಯವಾಗಿದೆ. ಸಾರ್ವಜನಿಕರಿಂದ ನಮಗೆ ನಿರಂತರ ದೂರುಗಳು ಬರುತ್ತಿವೆ. ನಿಯಮಿತವಾಗಿ ಕೆಲಸವನ್ನೇ ಸರಿಯಾಗಿ ಮಾಡದಿದ್ದರೆ, ನಿಮ್ಮನ್ನು ಕೆಲಸದಲ್ಲಿ ಖಾಯಂ ಮಾಡಬೇಕಾ?" ಎಂದು ಸಚಿವರು ಪ್ರಶ್ನಿಸಿದರು.
ಪರಿಶೀಲನೆ ವೇಳೆ 30% ನೌಕರರು ಗೈರುಹಾಜರಾಗಿರುವುದು ಬೆಳಕಿಗೆ ಬಂದಿದೆ. ಮನೆಗಳ ಗೇಟ್ ಹೊರಗೆ ಇರಿಸಿದ ವಿಂಗಡಿತ ತ್ಯಾಜ್ಯವನ್ನು ನೌಕರರೇ ಸರಿಯಾಗಿ ಸಂಗ್ರಹಿಸಬೇಕು, ನಾಗರಿಕರು ಹೊರಬರುವವರೆಗೆ ಕಾಯಬಾರದು ಎಂದು ಸೂಚಿಸಿದರು. ಕಸ ಬಿದ್ದು ನೈರ್ಮಲ್ಯ ಹಾಳಾಗಿರುವ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಯುಕ್ತರಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರ ಆರೋಗ್ಯ ಮತ್ತು ನಗರದ ನೈರ್ಮಲ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ