Publish Date: Sat, 07 Mar 2026 (10:41 IST)
Updated Date: Sat, 07 Mar 2026 (10:50 IST)
ಎಲ್ಲಾ ಸರಿ ಹೋಗಿದ್ದರೆ ಇದು ಬೆಂಗಳೂರಿನ ಎರಡನೇ ಲಾಲ್ ಭಾಗ್ ಆಗಬೇಕಿತ್ತು. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಮತ್ತಿಕೆರೆ ಬಳಿ ಜೆಪಿ ಪಾರ್ಕ್ ಪಾಳುಬಿದ್ದಂತಾಗಿದೆ.
ಬೆಂಗಳೂರಿನಲ್ಲಿ ಜನ ವೀಕೆಂಡ್ ನಲ್ಲಿ ಫ್ಯಾಮಿಲಿ ಸಮೇತ ಸ್ವಲ್ಪ ಹೊತ್ತು ಪರಿಸರದ ಮಧ್ಯೆ ಕಳೆಯೋಣವೆಂದರೆ ಲಾಲ್ ಭಾಗ್ ಅಥವಾ ಕಬ್ಬನ್ ಪಾರ್ಕ್ ಕಡೆ ಹೋಗುತ್ತಾರೆ. ಆದರೆ ಬೆಂಗಳೂರು ಉತ್ತರ ಭಾಗದ ಜನರಿಗೆ ಈ ಎರಡು ಜಾಗಗಳು ಸ್ವಲ್ಪ ದೂರವೇ.
ಆದರೆ ಮತ್ತಿಕೆರೆ ಬಳಿಕ ಜಯಪ್ರಕಾಶ ನಾರಾಯಣ ಪಾರ್ಕ್ ಸಾಕಷ್ಟು ವಿಶಾಲವಾಗಿದ್ದು ಲಾಲ್ ಭಾಗ್ ಗೇ ಪೈಪೋಟಿ ನೀಡುವಂತಿದೆ. ಈ ಪಾರ್ಕ್ ನ್ನು ಲಾಲ್ ಭಾಗ್ ಮಾದರಿಯಲ್ಲೇ ಅಭಿವೃದ್ಧಿ ಮಾಡಲು ಈ ಹಿಂದಿನ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ ಈಗ ಈ ಪಾರ್ಕ್ ನ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೇ ನಿಂತಿವೆ.
ಮ್ಯೂಸಿಕ್ ಕಾರಂಜಿ, ಸ್ವಿಮ್ಮಿಂಗ್ ಪೂಲ್, ರಾಕ್ ಹಿಲ್ ಪಾರ್ಕ್ ಜೊತೆಗೆ ಇಡೀ ಪಾರ್ಕ್ ಗೆ ಸುತ್ತು ಬರಲು ಪುಟಾಣಿ ರೈಲಿನ ವ್ಯವಸ್ಥೆ ಮಾಡಲೂ ಸಿದ್ಧತೆ ನಡೆದಿತ್ತು. ಆದರೆ ಈ ಕಾಮಗಾರಿಗಳೆಲ್ಲಾ ಅರ್ಧಕ್ಕೇ ನಿಂತಿವೆ. 2023 ರಲ್ಲೇ ಎಸಿ ಮತ್ತು ಎಸಿ ರಹಿತ ಪುಟಾಣಿ ರೈಲುಗಳನ್ನು ತಂದು ನಿಲ್ಲಿಸಲಾಗಿದೆ. ಆದರೆ ಈಗ ಇವೆಲ್ಲವೂ ಇಲ್ಲಿ ಮ್ಯೂಸಿಯಂನಲ್ಲಿಟ್ಟ ವಸ್ತುಗಳಂತೆ ಜನರಿಗೆ ವೀಕ್ಷಣೆಗೆ ಮಾತ್ರ ಲಭ್ಯವಿದೆ. ಪಾರ್ಕ್ ನ ಹಲವೆಡೆ ರೈಲಿನ ಟ್ರ್ಯಾಕ್ ಕೂಡಾ ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಯಾವುದೇ ಕಾಮಗಾರಿ ಮುಂದುವರಿದಿಲ್ಲ.
ಇನ್ನು ಪಾರ್ಕ್ ನ್ನು ಆಕರ್ಷಣೀಯವಾಗಿಸಲು ಮೊದಲು ಎತ್ತು, ಕಾಡು ಪ್ರಾಣಿಗಳು, ರೈತನ ಪ್ರತಿಮೆಗಳನ್ನು ಇಡಲಾಗಿತ್ತು. ಅವೆಲ್ಲವೂ ಈಗ ಹಾಳಾಗಿ ಅಲ್ಲೇ ಪಕ್ಕದಲ್ಲೇ ಅನಾಥವಾಗಿ ಬಿದ್ದಿದೆ. ಹಸಿರು ಹಸಿರಾಗಿರಬೇಕಾಗಿದ್ದ ಪ್ರದೇಶಗಳೆಲ್ಲಾ ನೀರು ಕಾಣದೇ ಬರಡು ಭೂಮಿಯಂತಾಗಿದೆ. ಸಂಗೀತ ಕಾರಂಜಿ ಯಾವುದೋ ಕಾಲದಲ್ಲಿತ್ತು ಎಂಬುದಕ್ಕೆ ಕುರುಹಾಗಿ ಒಂದು ಟಿಕೆಟ್ ಕೌಂಟರ್ ಕಾಣಿಸುತ್ತಿದೆ. ಇನ್ನು, ಸ್ವಿಮ್ಮಿಂಗ್ ಪೂಲ್ ಗೂ ಬೀಗ ಜಡಿಯಲಾಗಿದೆ.
ಹಾಗಿದ್ದರೂ ಇಲ್ಲಿಗೆ ಸಾಕಷ್ಟು ಜನ ವಾಯು ವಿಹಾರಕ್ಕೆ ಬರುತ್ತಾರೆ. ಸಂಗೀತ ಕಾರಂಜಿ, ಸ್ವಿಮ್ಮಿಂಗ್ ಪೂಲ್, ರೈಲು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಸಾಕಷ್ಟು ಜನ ಬರಬಹುದು. ಟಿಕೆಟ್ ಕೊಟ್ಟು ಇಂತಹ ಮನರಂಜನೆಗಳ ಲಾಭ ಪಡೆದರೆ ಸರ್ಕಾರವೂ ಆದಾಯವಾಗುತ್ತದೆ. ಆದರೆ ಗ್ಯಾರಂಟಿಗಳ ಗೌಜಿಯಲ್ಲಿ ಇಂತಹವುಗಳೆಲ್ಲಾ ಅನುದಾನ ಕಾಣದೇ ಅರ್ಧಕ್ಕೇ ನಿಂತು ತುಕ್ಕು ಹಿಡಿಯುತ್ತಿವೆ.