ಕಾಂಗ್ರೆಸ್ ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಶಾಸಕ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಪಕ್ಕಾ ಆದಂತಿದೆ.
ಕಾಂಗ್ರೆಸ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಈಗಾಗಲೇ ಆಪ್ತರು ಹಾಗೂ ಕ್ಷೇತ್ರದ ಪ್ರಮುಖರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿರುವ ಉಮೇಶ್ ಜಾಧವ್ ರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.
ಇಂದು ಇಲ್ಲವೇ ನಾಳೆ ಜಾಧವ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಕಾಂಗ್ರೆಸ್ನಿಂದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಎದುರಾಗಬಹುದಾದ ಕಾನೂನು ಹೋರಾಟದ ಸಾಧಕ, ಬಾಧಕಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡುತ್ತಿದ್ದಂತೆ, ಮುಂಬೈನಲ್ಲಿರುವ ಅತೃಪ್ತರು, ಜಾಧವ್ ಅವರ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ ಕಣಕ್ಕಿಳಿಯುವ ಸಾಧ್ಯತೆಗಳಿವೆ.